ಮಲಗಿದ್ದ ನಾಯಿಯ ಮೇಲೆ ಆ್ಯಸಿಡ್​ ಸುರಿದ ಮಹಿಳೆ: ಕ್ಷುಲ್ಲಕ ಕಾರಣಕ್ಕೆ ಮೂಕ ಪ್ರಾಣಿಯ ಮೇಲೆ ದರ್ಪ..

mumbai woman
Published on

ಮುಂಬೈ: ಇತ್ತೀಚೆಗೆ ಸಾಕು ನಾಯಿಗಳಿಂದಾಗಿ ಅಕ್ಕಪಕ್ಕದವರ ನಡುವೆ ಜಗಳವಾಗುವ ಘಟನೆಗಳು ಹೆಚ್ಚಾಗುತ್ತಿದ್ದು, ಪರಸ್ಪರ ಆರೋಪ ಪ್ರತ್ಯಾರೋಪಗಳು ಕೂಡ ಕೇಳಿ ಬರುತ್ತವೆ. ಆದರೆ ಮಹಿಳೆಯೊಬ್ಬರು ನಾಯಿಯ ಮೇಲೆ ಆ್ಯಸಿಡ್ ಸುರಿದಿರುವ ದಾರುಣ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ನಡೆದಿದೆ.

ಇಲ್ಲಿನ ಮಲ್ವಾನಿ ಪ್ರದೇಶದ ಶಬಿಸ್ತಾ ಸುಹೇಲ್ ಅನ್ಸಾರಿ(35) ಎಂಬಾಕೆ, ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಮತ್ತೊಂದು ಕುಟುಂಬದವರು ಸಾಕಿದ್ದ ಬ್ರೌನಿ ಎಂಬ ನಾಯಿಯ ಮೇಲೆ ಆಸಿಡ್ ಸುರಿದು ಚರ್ಚೆಯ ವಿಷಯವಾಗಿದ್ದಾಳೆ. ಆಸಿಡ್ ದಾಳಿಯಿಂದಾಗಿ ನಾಯಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಪಶು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಆದರೆ ನಾಯಿಯ ಮೇಲೆ ಆಸಿಡ್ ಎರಚಿದ ಕಾರಣವನ್ನು ಮಹಿಳೆ ಬಹಿರಂಗಪಡಿಸಿದ್ದಾಳೆ. ಮಹಿಳೆ ಸಾಕುತ್ತಿರುವ ಬೆಕ್ಕಿನ ಜತೆಗೆ ಬ್ರೌನಿ ಆಟವಾಡುತ್ತಿತ್ತು. ಇದನ್ನು ಗಮನಿಸಿದ ಮಹಿಳೆಯು ನಾಯಿಯ ಮಾಲೀಕರಿಗೆ ಹಲವು ಬಾರಿ ದೂರು ನೀಡಿದ್ದೆ. ಇದಾದ ಬಳಿಕವೂ ಬ್ರೌನಿ ಮತ್ತು ಬೆಕ್ಕು ಆಟವಾಡುವುದನ್ನು ನಿಲ್ಲಿಸಿರಲಿಲ್ಲ. ಹಾಗಾಗಿ ಅಪಾರ್ಟಮೆಂಟ್ ಎದುರು ಮಲಗಿದ್ದ ನಾಯಿ ಮೇಲೆ ಆ್ಯಸಿಡ್ ಸುರಿದಿದ್ದಾಳೆ ಎಂದು ಹೇಳಲಾಗಿದೆ.

ಬ್ರೌನಿಯ ನಾಯಿಯ ಮಾಲೀಕರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಅಧಿಕಾರಿಗಲು ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಪರಿಶೀಲಿಸಿದ್ದಾರೆ. ಮಹಿಳೆಯ ಕೃತ್ಯವು ಅದರಲ್ಲಿ ದಾಖಲಾಗಿದ್ದು, ಆ ವಿಡಿಯೋ ಆಧರಿಸಿ ಪೊಲೀಸರು ಶಬಿಸ್ತಾಳನ್ನು ಬಂಧಿಸಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯಕ್ಕಾಗಿ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net