ಸನ್‌ರೈಸರ್ಸ್‌ ಹೈದರಾಬಾದ್ ತಂಡಕ್ಕೆ ಹ್ಯಾಟ್ರಿಕ್ ಸೋಲು, ಮುಂಬೈ ಎದುರು 13 ರನ್ ಸೋಲು

IPL
Published on

ಚೆನ್ನೈ: ಕಳೆದ ವರ್ಷ ಐಪಿಎಲ್‌ನಲ್ಲಿ ನಾಯಕ ಡೇವಿಡ್ ವಾರ್ನರ್ - ಜಾನಿ ಬೇರ್‌ಸ್ಟೋ ಆರಂಭಿಕ ಜೋಡಿಯ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿದ್ದ ಸನ್‌ರೈಸರ್ಸ್‌ ಹೈದರಾಬಾದ್ ಶನಿವಾರದ ಐಪಿಎಲ್-14 ಲೀಗ್ ಪಂದ್ಯದಲ್ಲೂ ಮತ್ತದೇ ವಾರ್ನರ್ (36ರನ್, 43 ಎಸೆತ, 2 ಬೌಂಡರಿ, 2 ಸಿಕ್ಸರ್), ಬೇರ್‌ಸ್ಟೋ (43 ರನ್, 22 ಎಸೆತ, 3 ಬೌಂಡರಿ, 4 ಸಿಕ್ಸರ್) ಸ್ಫೋಟಕ ಆಟದಿಂದ ಗೆಲುವಿನ ಕನಸು ಕಂಡಿತ್ತು. ಆದರೆ, ತಂಡವನ್ನು ಬಿಟ್ಟೂಬಿಡದೆ ಕಾಡುತ್ತಿರುವ ಕಳಪೆ ಮಧ್ಯಮ ಕ್ರಮಾಂಕದ ಗೋಳು ಹೆಗಲೇರಿದ್ದರಿಂದ ಟೂರ್ನಿಯಲ್ಲಿ ಸತತ 3ನೇ ಸೋಲಿಗೆ ಕೊರಳೊಡ್ಡಿ ಹತಾಶೆಗೆ ಸಿಲುಕಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 5 ವಿಕೆಟ್‌ಗೆ 150 ರನ್ ಪೇರಿಸಿತು. ಪ್ರತಿಯಾಗಿ 7.2 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 67 ರನ್ ಗಳಿಸಿದ್ದ ಸನ್‌ರೈಸರ್ಸ್‌, 35 ರನ್‌ಗಳಿಗೆ ಕೊನೆಯ 7 ವಿಕೆಟ್ ಕಳೆದು ಕೊಂಡು 13 ರನ್‌ಗಳಿಂದ ಶರಣಾಯಿತು. ಮುಂಬೈನ ರಾಹುಲ್ ಚಹರ್ (19ಕ್ಕೆ 3) ಹಾಗೂ ಟ್ರೆಂಟ್ ಬೌಲ್ಟ್ (28ಕ್ಕೆ 3) ಹೈದರಾಬಾದ್ ಕನಸಿಗೆ ಬ್ರೇಕ್ ಹಾಕಿದರು.

ಸುಧಾರಿಸದ ಸನ್‌ರೈಸರ್ಸ್‌ ಮಧ್ಯಮ ಕ್ರಮಾಂಕ: ತಂಡದಲ್ಲಿ 4 ಬದಲಾವಣೆ ಸಹಿತ ಮಧ್ಯಮ ಕ್ರಮಾಂಕದಲ್ಲಿ ಹೊಸಮುಖ ವಿರಾಟ್ ಸಿಂಗ್ ಮತ್ತು ಸ್ಪಿನ್ ಆಲ್ರೌಂಡರ್ ಅಭಿಷೇಕ್ ಶರ್ಮಗೆ ಅವಕಾಶ ನೀಡಿದ್ದು ಹೈದರಾಬಾದ್‌ಗೆ ಫಲ ನೀಡಲಿಲ್ಲ. ಮೊದಲೆರಡು ಪಂದ್ಯದಲ್ಲಿ ಇನಿಂಗ್ಸ್ ಆಧರಿಸಿದ್ದ ಮನೀಷ್ ಪಾಂಡೆಯೂ 2 ರನ್‌ಗೆ ಸೀಮಿತರಾದರು. ಬೌಲಿಂಗ್‌ನಲ್ಲಿ ಮಿಂಚಿದ್ದ ವಿಜಯ ಶಂಕರ್ ಬ್ಯಾಟಿಂಗ್‌ನಲ್ಲೂ ಕೆಲ ಕಾಲ ತಂಡ ಆಧರಿಸಿ 2 ಸಿಕ್ಸರ್ ಒಳಗೊಂಡ 28 ರನ್ ಗಳಿಸಿದರಾದರೂ, ತಂಡ ಗೆಲ್ಲಿಸುವ ಆಟ ಅವರಿಂದ ಬರಲಿಲ್ಲ. ಅಬ್ದುಲ್ ಸಮದ್, ರಷೀದ್ ಖಾನ್ ಸಹ ವಿಫಲರಾಗಿದ್ದು ತಂಡಕ್ಕೆ ದುಬಾರಿಯಾಯಿತು.


ಮುಂಬೈ ಇಂಡಿಯನ್ಸ್: 5 ವಿಕೆಟ್‌ಗೆ 150 (ಕ್ವಿಂಟನ್ ಡಿ ಕಾಕ್ 40, ರೋಹಿತ್ ಶರ್ಮ 32, ಕೈರಾನ್ ಪೊಲ್ಲಾರ್ಡ್ 35*, ಮುಜೀಬ್ ರೆಹಮಾನ್ 29ಕ್ಕೆ 2, ವಿಜಯ್ ಶಂಕರ್ 19ಕ್ಕೆ 2), ಸನ್‌ರೈಸರ್ಸ್‌ ಹೈದರಾಬಾದ್: 19.4 ಓವರ್‌ಗಳಲ್ಲಿ 137 (ಡೇವಿಡ್ ವಾರ್ನರ್ 36, ಜಾನಿ ಬೇರ್‌ಸ್ಟೋ 43, ವಿಜಯ್ ಶಂಕರ್ 28, ಟ್ರೆಂಟ್ ಬೌಲ್ಟ್ 28ಕ್ಕೆ 3, ರಾಹುಲ್ ಚಹರ್ 19ಕ್ಕೆ 3, ಜಸ್‌ಪ್ರೀತ್ ಬುಮ್ರಾ 14ಕ್ಕೆ 1).

ಸನ್‌ರೈಸರ್ಸ್‌, ಮುಂಬೈ ಇಂಡಿಯನ್ಸ್, ಐಪಿಎಲ್-14, ಕ್ರಿಕೆಟ್, ಟಿ20

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net