IPL 2026 | ಈ ಇಬ್ಬರು ಲೆಗ್ ಸ್ಪಿನ್ನರ್ಸ್​ ಮೇಲೆ ಮುಂಬೈ ಇಂಡಿಯನ್ಸ್​ ಕಣ್ಣು; ಮತ್ತೆ ಹಳೆಯ ಆಟಗಾರರತ್ತ ಒಲವು ತೋರಿತಾ ಎಂಐ..?

Mumbai Indians
Published on

ಮುಂಬೈ: ಈ ವರ್ಷದ ಐಪಿಎಲ್ ​(IPL 2026) ಹರಾಜಿಗೆ ವೇದಿಕೆ ಸಿದ್ಧವಾಗುತ್ತಿದ್ದು, ತಮ್ಮ ತಂಡದ ಆಟಗಾರರನ್ನು ಉಳಿಸಿಕೊಳ್ಳಲು ಮತ್ತು ಕೈ ಬಿಡಲು ನವೆಂಬರ್ 15 ಕೊನೆ ದಿನವಾಗಿದೆ. ಹರಾಜಿಗೆ ಮುಂಚಿತವಾಗಿ ಎಲ್ಲಾ 10 ಫ್ರಾಂಚೈಸಿಗಳು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.

ಇತ್ತೀಚೆಗೆ ಐಪಿಎಲ್ ಟ್ರೇಡ್​ ಮಾತುಕತೆಗಳು ಭಾರೀ ಸದ್ದು ಮಾಡಿದ್ದು, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಂಜು ಸ್ಯಾಮ್ಸನ್ ಮತ್ತು ರವೀಂದ್ರ ಜಡೇಜಾ ವಿನಿಮಯವು ಸುದ್ದಿಗಳು ಜೊರಾಗಿವೆ. ಈ ನಡುವೆ ಉಳಿದ ತಂಡಗಳು ಕೂಡ ಸಮತೋಲನ ತರುವ ನಿಟ್ಟಿನಲ್ಲಿ ಕೆಲ ಬದಲಾವಣೆ ಮಾಡಲು ನಿರ್ಧರಿಸಿವೆ.

ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​, ಅರ್ಜುನ್ ತೆಂಡೂಲ್ಕರ್ ಬದಲಿಗೆ ಶಾರ್ದೂಲ್ ಠಾಕೂರ್​ರನ್ನು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ ಎನ್ನುವ ಪಿಸು ಮಾತುಗಳು ಕೇಳಿ ಬರುತ್ತಿದ್ದು, ಎಂಐ ತಂಡದ ಬ್ಯಾಟಿಂಗ್​ ಮತ್ತು ವೇಗದ ಬೌಲಿಂಗ್​ ವಿಭಾಗ ಉತ್ತಮವಾಗಿದ್ದು, ತಜ್ಞ ಸ್ಪಿನ್ನರ್​ ಕೊರತೆ ಪ್ರಶಸ್ತಿಯಿಂದ ದೂರ ಉಳಿಯುವಂತೆ ಮಾಡುತ್ತಿದೆ. ಕಳೆದ ವರ್ಷ ಹಿರಿಯ ಸ್ಪಿನ್ನರ್ ಕರ್ಣ ಶರ್ಮಾ ಏಕಾಂಗಿಯಾಗಿ ತಂಡಕ್ಕೆ ನೆರವಾಗಿದ್ದರು.

ಈ ಎಲ್ಲ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಎಂಐ ಆಡಳಿತ ಮಂಡಳಿ ತಮ್ಮ ಹಳೆಯ ಲೆಗ್ ಸ್ಪಿನ್ನರ್ ಮಯಾಂಕ್ ಮಾರ್ಕಂಡೆ ಅವರತ್ತ ಒಲವು ತೋರಿದೆ ಎಂದು ಮೂಲಗಳು ತಿಳಿಸಿದ್ದು, ಕಳೆದ ಋತುವಿನಲ್ಲಿ ಕೆಕೆಆರ್​ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದ ಮಾರ್ಕಂಡೆಯನ್ನು MI ಪೂರ್ಣ ನಗದು ಒಪ್ಪಂದದ ಮೂಲಕ ಪಡೆಯಲು ಸಿದ್ಧವಾಗಿರುವ ಮಾಹಿತಿಗಳು ಲಭ್ಯವಾಗಿದೆ. ಒಂದು ವೇಳೆ ಇದು ನಿಜವೇ ಆದರೆ ಮಾಯಾಂಕ್​ ತಮ್ಮ ಮೂಲ ತಂಡಕ್ಕೆ ಮರಳಲಿದ್ದಾರೆ. 2018 ರಲ್ಲಿ ಮುಂಬೈ ಪರ ಆಡಿದ್ದ ಮಾರ್ಕಂಡೆ ಅದ್ಭುತ ಪ್ರದರ್ಶನ ನೀಡಿ, ಆ ಋತುವಿನಲ್ಲಿ 15 ವಿಕೆಟ್‌ಗಳನ್ನು ಕಬಳಿಸಿದ್ದರು.

ಮುಂಬೈ ಇಂಡಿಯನ್ಸ್​ ಮತ್ತೊಬ್ಬ ಲೆಗ್ ಸ್ಪಿನ್ನರ್ ರಾಹುಲ್ ಚಾಹರ್ ಮೇಲೆ ಕೂಡ ಕಣ್ಣಿಟ್ಟಿದ್ದು. ರಾಹುಲ್ 2025 ರ ಐಪಿಎಲ್​​ನಲ್ಲಿ ಹೈದ್ರಾಬಾದ್​ ತಂಡದ ಪರವಾಗಿ ಕೇವಲ ಒಂದು ಪಂದ್ಯ ಆಡಿದ್ದರು. 2020 ರ ಐಪಿಎಲ್ ಚಾಂಪಿಯನ್​​ ಎಂಐ ತಂಡದ ಪ್ರಮುಖ ಸದಸ್ಯರಾಗಿದ್ದರು. ಈಗಾಗಲೇ ಮುಂಬೈ ತಂಡದಲ್ಲಿ ವಿಘ್ನೇಶ್ ಪುತ್ತೂರ್ ಮತ್ತು ಕರ್ಣ್ ಶರ್ಮಾ ಭಾರತೀಯ ಸ್ಪಿನ್ ಆಯ್ಕೆಗಳಿದ್ದು, ಮಿಚೆಲ್ ಸ್ಯಾಂಟ್ನರ್ ಮತ್ತು ವಿಲ್ ಜ್ಯಾಕ್ಸ್ ವಿದೇಶಿ ಸ್ಪಿನ್ನರ್​ಗಳಾಗಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net