

ಅಬುಧಾಬಿ: ಸರ್ವಾಂಗೀಣ ನಿರ್ವಹಣೆ ತೋರಿದ ಕೋಲ್ಕತ ನೈಟ್ ರೈಡರ್ಸ್ ತಂಡ ಐಪಿಎಲ್-14ರ ಎರಡನೇ ಭಾಗದ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು 7 ವಿಕೆಟ್ ಜಯ ದಾಖಲಿಸಿತು. ಈ ಮೂಲಕ ಲೀಗ್‌ನಲ್ಲಿ 4ನೇ ಗೆಲುವು ದಾಖಲಿಸಿದ ಕೆಕೆಆರ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರುವ ಮೂಲಕ ಪ್ಲೇಆಫ್ ಹಾದಿಯ ರೇಸ್‌ನಲ್ಲಿ ಉಳಿಯಿತು. ಮತ್ತೊಂದೆಡೆ, ಅರಬ್‌ನಾಡಿನಲ್ಲಿ ಸತತ ಎರಡನೇ ಸೋಲು ಕಂಡ ರೋಹಿತ್ ಶರ್ಮ ಬಳಗದ ಮುಂದಿನ ಹಾದಿ ತೂಗುಯ್ಯಲೆಯಲ್ಲಿ ಸಿಲುಕಿತು. ಕಡೇ 14 ಮುಖಾಮುಖಿಯಲ್ಲಿ ಮುಂಬೈ ಎದುರು ಕೆಕೆಆರ್ ತಂಡಕ್ಕೆ 3ನೇ ಗೆಲುವು ಇದಾಗಿದೆ.
ಜಯೇದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, ಕ್ವಿಂಟನ್ ಡಿಕಾಕ್ (55ರನ್, 42 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ರೋಹಿತ್ ಶರ್ಮ (33 ರನ್, 30 ಎಸೆತ, 4 ಬೌಂಡರಿ) ಜೋಡಿಯ ಅಬ್ಬರದ ಫಲವಾಗಿ 6 ವಿಕೆಟ್‌ಗೆ 155 ರನ್ ಪೇರಿಸಿತು. ಪ್ರತಿಯಾಗಿ ಕೆಕೆಆರ್ ತಂಡ ಯುವ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ (53ರನ್, 30 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ರಾಹುಲ್ ತ್ರಿಪಾಠಿ (74*ರನ್, 42 ಎಸೆತ, 8 ಬೌಂಡರಿ, 3 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಲವಾಗಿ 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 159 ರನ್‌ಗಳಿಸಿ ಗೆಲುವಿನ ದಡ ಸೇರಿತು.
ಮುಂಬೈ ಇಂಡಿಯನ್ಸ್: 6 ವಿಕೆಟ್‌ಗೆ 155 (ಕ್ವಿಂಟನ್ ಡಿ ಕಾಕ್ 55, ರೋಹಿತ್ ಶರ್ಮ 33, ಕೈರಾನ್ ಪೊಲ್ಲಾರ್ಡ್ 21, ಲಾಕಿ ಫರ್ಗ್ಯುಸನ್ 27ಕ್ಕೆ 2, ಪ್ರಸಿದ್ಧ ಕೃಷ್ಣ 43ಕ್ಕೆ 2), ಕೋಲ್ಕತ ನೈಟ್ ರೈಡರ್ಸ್: 15.1 ಓವರ್‌ಗಳಲ್ಲಿ 3 ವಿಕೆಟ್‌ಗೆ 159 (ರಾಹುಲ್ ತ್ರಿಪಾಠಿ 74*, 42 ಎಸೆತ, 8 ಬೌಂಡರಿ, 3 ಸಿಕ್ಸರ್, ಬುಮ್ರಾ 43ಕ್ಕೆ 3).