ಇನ್ಯಾವತ್ತು ಕೇರಳ ಕಡೆ ಕಾಲಿಡಲ್ಲ! ಕಹಿ ಘಟನೆ ನೆನೆದು ಕಟು ನಿರ್ಧಾರ ಕೈಗೊಂಡ ಯುವತಿ | Mumbai Girl

Untitled design (15)
Published on

ಇಡುಕ್ಕಿ: ಮುಂಬೈ ಮೂಲದ ಯುವತಿಯೊಬ್ಬಳು (Mumbai Girl ) ಇತ್ತೀಚೆಗಷ್ಟೇ ಕೇರಳದ ಮುನ್ನಾರ್‌ಗೆ ಭೇಟಿ ನೀಡಿದ್ದರು. ಈ ವೇಳೆ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿರುವ ಅವರು, ಜೀವನದಲ್ಲಿ ಇನ್ಯಾವತ್ತು ಕೇರಳಕ್ಕೆ ಬರುವುದಿಲ್ಲ ಎಂದಿರುವ ವಿಡಿಯೋ ಸದ್ಯ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಸ್ಥಳೀಯ ಟ್ಯಾಕ್ಸಿ ಚಾಲಕರು

ಪ್ರವಾಸಕ್ಕೆಂದು ಮುನ್ನಾರ್​ಗೆ ಪ್ರಯಾಣಿಸಿದ್ದ ಯುವತಿಗೆ ಅಲ್ಲಿನ ಸ್ಥಳೀಯ ಟ್ಯಾಕ್ಸಿ ಚಾಲಕರು ಮತ್ತು ಪೊಲೀಸ್ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವತಿಯನ್ನು ಜಾನ್ವಿ ಎಂದು ಆಕೆ ಮಾಡಿರುವ ಪೋಸ್ಟ್​ ಮೂಲಕ ಗುರುತಿಸಲಾಗಿದೆ. ಯುವತಿ ಹರಿಬಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ವಿಷಯ ಬೆಳಕಿಗೆ ಬಂದಿದ್ದು, ಘಟನೆಯಿಂದ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸ್ ಇಲಾಖೆ, ಇದೀಗ ಸುಮೋಟೋ ಕೇಸ್​ ದಾಖಲಿಸಿಕೊಂಡಿದೆ.

ವಿಡಿಯೋ ಕ್ಲಿಪ್‌ನಲ್ಲಿ, ಮುಂಬೈನ ಸಹಾಯಕ ಪ್ರಾಧ್ಯಾಪಕಿ ಎನ್ನಲಾದ ಜಾನ್ವಿ, ಮುನ್ನಾರ್​ನ ಗಿರಿಧಾಮಕ್ಕೆ ಭೇಟಿ ನೀಡಿದ್ದರು. ಈ ಸಮಯದಲ್ಲಿ, ಆನ್‌ಲೈನ್​ನಲ್ಲಿ ಬುಕ್​ ಮಾಡಿದ ಕ್ಯಾಬ್‌ಗಳಲ್ಲಿ ಕೊಚ್ಚಿ ಮತ್ತು ಅಲಪ್ಪುಳಕ್ಕೆ ಪ್ರಯಾಣಿಸಿದ ಅವರು, ಮುನ್ನಾರ್ ತಲುಪಲು ಇದೇ ಟ್ಯಾಕ್ಸಿಯನ್ನು ಆಯ್ಕೆ ಮಾಡಿಕೊಂಡರು. ಆದಾಗ್ಯೂ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಸ್ಥಳೀಯ ಟ್ಯಾಕ್ಸಿ ಚಾಲಕರ ಗುಂಪೊಂದು ಅವರಿದ್ದ ಕ್ಯಾಬ್​ ಅನ್ನು ತಡೆದು, ಅಪ್ಲಿಕೇಶನ್ ಆಧರಿತ ಟ್ಯಾಕ್ಸಿಗಳನ್ನು ನಿಷೇಧಿಸಲಾಗಿದೆ ಎಂದು ಗದರಿಸಿದ್ದಾಗಿ ಹೇಳಿಕೊಂಡಿದ್ದಾರೆ.

ಬೆದರಿಕೆಗಳ ಬೆನ್ನಲ್ಲೇ ವಿಡಿಯೋ ಡಿಲೀಟ್​!

ಈ ವೇಳೆ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದಾಗ, ಅವರು ಸಹ ಸ್ಥಳೀಯ ಚಾಲಕರನ್ನು ಬೆಂಬಲಿಸಿ, ಸ್ಥಳೀಯ ಟ್ಯಾಕ್ಸಿಯಲ್ಲಿ ಮಾತ್ರ ಪ್ರಯಾಣಿಸಬೇಕು ಎಂದಿದ್ದಾಗಿ ಯುವತಿ ಹೇಳಿದ್ದಾರೆ. ಇಲ್ಲಿಂದ ಮುಂದೆ ಹೋಗುವುದು ಸರಿಯಲ್ಲ ಎಂದು ಭಾವಿಸಿದ ಜಾನ್ವಿ, ಮತ್ತೆಂದೂ ನಾನು ಕೇರಳಕ್ಕೆ ಭೇಟಿ ನೀಡುವುದಿಲ್ಲ. ನಾನು ಕೇರಳದ ಸೌಂದರ್ಯ ಮತ್ತು ಆತಿಥ್ಯವನ್ನು ಪ್ರೀತಿಸುವೆ. ಆದರೆ, ಸುರಕ್ಷಿತವಾಗಿಲ್ಲದ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ವಿಡಿಯೋ ಮೂಲಕ ತಮ್ಮ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಯುವತಿಯ ಪೋಸ್ಟ್ ವೈರಲ್ ಬೆನ್ನಲ್ಲೇ ಮುನ್ನಾರ್ ಪೊಲೀಸರು ನವೆಂಬರ್ 2ರಂದು ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 126(2) (ತಪ್ಪು ಸಂಯಮ), 351(2) (ಕ್ರಿಮಿನಲ್ ಬೆದರಿಕೆ), ಮತ್ತು 3(5) (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಗುರುತಿಸಲಾಗದ ಟ್ಯಾಕ್ಸಿ ಚಾಲಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿದ್ದಾರೆ. ಎಫ್​ಐಆರ್​ ಪ್ರಕಾರ, ಈ ಘಟನೆ ಅಕ್ಟೋಬರ್ 30ರಂದು ಮುನ್ನಾರ್ ಪೊಲೀಸ್ ಠಾಣೆಯಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ರಾಜ್ಯ ಸಾರಿಗೆ ಬಸ್ ನಿಲ್ದಾಣದ ಬಳಿ ಸಂಭವಿಸಿದೆ ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net