

ಮುಂಬೈ: 14 ವರ್ಷದ ಬಾಲಕ, ಡೆಂಗ್ಯೂ, ಮಲೇರಿಯಾ ಮತ್ತು ಲೆಪ್ಟೊಸ್ಪೈರೋಸಿಸ್‌ಗೆ ಏಕಕಾಲಕ್ಕೆ ಸೋಂಕಿಗೆ ತುತ್ತಾಗಿದ್ದು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ಮುಂಬೈನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಗ್ರಾಪಂಗಳಲ್ಲಿ ಸಂಭ್ರಮಾಚರಣೆ
ಘಟನೆಯ ವಿವರ: ವರದಿಗಳ ಪ್ರಕಾರ, ಈ ತಿಂಗಳ ಪ್ರಾರಂಭದಲ್ಲಿ ಬಾಲಕನಿಗೆ ಜ್ವರ ಕಾಣಿಸಿಕೊಂಡಿತ್ತು. ಆದಾಗ್ಯೂ, ಚಿಕಿತ್ಸೆಗೆ ವೈದ್ಯರನ್ನು ಸಂಪರ್ಕಿಸಲಿಲ್ಲ. ಬದಲಿಗೆ ಸುಮಾರು ಒಂದು ವಾರದವರೆಗೆ ತಮಗೆ ತಿಳಿದಿದ್ದ ವೈದ್ಯರ ಮಾತನ್ನು ಮಾತ್ರ ಕೇಳಿದ್ದಾನೆ ಎನ್ನಲಾಗಿದೆ.
ತದನಂತರ ಆಗಸ್ಟ್ 14 ರಂದು ಬಾಲಕ ಸರ್ಕಾರಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಪರೀಕ್ಷೆ ನಡೆಸಿದ ವೈದ್ಯರು ಡೆಂಗ್ಯೂ ಮತ್ತು ಮಲೇರಿಯಾ ಎರಡೂ ಪಾಸಿಟಿವ್ ಇರುವುದನ್ನು ದೃಢಪಡಿಸಿದ್ದಾರೆ. ಆಶ್ಚರ್ಯ ಸಂಗತಿ ಎಂದರೆ ಹೆಚ್ಚುವರಿ ವೈದ್ಯಕೀಯ ಪರೀಕ್ಷೆಯಲ್ಲಿ ಆತನಿಗೆ ಲೆಪ್ಟೊಸ್ಪೈರೋಸಿಸ್ ಇರುವುದು ಕೂಡ ದೃಢಪಟ್ಟಿದೆ.
ಬಾಲಕನ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದ ಹಿನ್ನೆಲೆ ಆತನನ್ನು ಮುಂಬೈ ಸೆಂಟ್ರಲ್‌ನ ನಾಯರ್ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ತೀವ್ರ ಶ್ವಾಸಕೋಶದ ತೊಂದರೆಗಳನ್ನು ಅನುಭವಿಸಿದ ಕಾರಣ ಹುಡುಗನನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ಈ ವೇಳೆ ಆತನ ಕ್ರಿಯೇಟಿನೈನ್ ಮಟ್ಟವೂ ಹೆಚ್ಚಿತ್ತು ಎಂದು ವರದಿ ಉಲ್ಲೇಖಿಸಿದೆ.
ಉಲ್ಬಣಗೊಳ್ಳುವ ಲಕ್ಷಣಗಳು, ಸೋಂಕುಗಳು ಮತ್ತು ಬಹು-ಅಂಗಾಂಗಗಳ ವೈಫಲ್ಯವನ್ನು ನಿಯಂತ್ರಿಸಲು ವೈದ್ಯರ ನಿರಂತರ ಪ್ರಯತ್ನಗಳು ಫಲಿಸದೆ ಬಾಲಕ ಆಸ್ಪತ್ರೆಗೆ ದಾಖಲಾದ ಮೂರು ದಿನಗಳ ಬಳಿಕ ಮೃತಪಟ್ಟಿದ್ದಾನೆ. ಈ ಬಗ್ಗೆ ಮಾತನಾಡಿರುವ ಹಿರಿಯ ವೈದ್ಯ ಗಿರೀಶ್ ರಾಜಾಧ್ಯಕ್ಷ, "ಏಕಕಾಲಕ್ಕೆ ಮೂರು ಸೋಂಕಿಗೆ ಒಳಗಾಗುವುದು ಅಸಾಧ್ಯ. ಆದ್ರೆ, ಇಂತಹ ಪ್ರಕರಣ ಅತ್ಯಂತ ಅಪರೂಪದ ಘಟನೆ. ಮೊದಲೇ ವೈದ್ಯಕೀಯ ನೆರವು ಪಡೆದಿದ್ದರೆ ಬಾಲಕನನ್ನು ರಕ್ಷಿಸಬಹುದಿತ್ತು" ಎಂದು ವೈದ್ಯರು ತಿಳಿಸಿದ್ದಾರೆ,(ಏಜೆನ್ಸೀಸ್).