

ಮುಂಬೈ: ಮಹಾರಾಷ್ಟ್ರದ ಕಾರಂಜಾದಲ್ಲಿ ಸಮುದ್ರದಲ್ಲಿ ಸಂಭವಿಸಿದ ದೋಣಿ ಅಪಘಾತಕ್ಕೆ(Mumbai Boat Tragedy) ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಂದಿದೆ. ಈ ಅಪಘಾತಕ್ಕೆ ಕಾರಣವಾದ ನೌಕಾಪಡೆಯ ಸ್ಪೀಡ್‌ಬೋಟ್‌ನ ಇಂಜಿನ್ ಕೆಟ್ಟಿರಲಿಲ್ಲ ಎಂದು ಈ ಅಪಘಾತದಿಂದ ಬದುಕುಳಿದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ನೌಕಾಪಡೆಯ ತಂಡ ಸ್ಪೀಡ್‌ಬೋಟ್‌ನಲ್ಲಿ ಪ್ರದರ್ಶನ(ಸ್ಟಂಟ್) ನೀಡುತ್ತಿದೆ ಎಂದುಕೊಂಡಿದ್ದೆವು ಎಂದು ಸಂತ್ರಸ್ತರು ಹೇಳಿದರು.
ಘಟನೆ ಕುರಿತು ಮಾತನಾಡಿರುವ ಪಾಲ್ಘರ್ ಜಿಲ್ಲೆಯ ಬಳಿಯಿರುವ ನಲಸೋಪಾರದ ತರಕಾರಿ ಮಾರಾಟಗಾರ ಗೌರವ್ ಗುಪ್ತಾ, ತನ್ನ ಚಿಕ್ಕಮ್ಮ ಮತ್ತು ಇತರ ಸಂಬಂಧಿಕರೊಂದಿಗೆ ದೋಣಿಯಲ್ಲಿ ಪ್ರಯಾಣಿಸುತ್ತಿದ್ದೆವು. ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಅವರ ಚಿಕ್ಕಮ್ಮ ಮತ್ತು ಇತರ ಸಂಬಂಧಿಕರು ಕಳೆದ ವಾರ ಮುಂಬೈಗೆ ಬಂದಿದ್ದರು ಎಂದು ತಿಳಿಸಿದ್ದಾರೆ. ನಾನು ಅವರೆಲ್ಲರನ್ನೂ ವಿಹಾರಕ್ಕೆ ಕರೆತಂದಿದ್ದೆ ಆದರೆ ಇದು ಅವರ ಜೀವನದ ಕೊನೆಯ ದಿನ ಎಂದು ನನಗೆ ತಿಳಿದಿರಲಿಲ್ಲ ಎಂದು ಗೌರವ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಇಂಜಿನ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂಬ ನೌಕಾಪಡೆಯ ಹೇಳಿಕೆಯನ್ನು ಗೌರವ್ ತಿರಸ್ಕರಿಸಿದ್ದಾರೆ. ನೌಕಾಪಡೆಯ ಬೋಟ್ನ ಚಾಲಕ ಮೋಜಿನ ಮೂಡ್‌ನಲ್ಲಿದ್ದನು ಮತ್ತು ಸಾಹಸ(ಸ್ಟಂಟ್)ಗಳನ್ನು ಮಾಡುತ್ತಿದ್ದನು. ಅನೇಕ ಪ್ರಯಾಣಿಕರಂತೆ ತಾನೂ ಕೂಡ ಆ ಸ್ಪೀಡ್ ಬೋಟ್ನ ವಿಡಿಯೋ ಮಾಡುವುದರಲ್ಲಿ ನಿರತನಾಗಿದ್ದೆ. ಸ್ಪೀಡ್ ಬೋಟ್ನ ಡ್ರೈವರ್ ನೀರಲ್ಲಿ ತಿರುಗಾಡುತ್ತಿದ್ದಾಗ ಬೋಟ್ ಸ್ಟಿಯರ್ ಮಾಡುತ್ತಿದ್ದ ರೀತಿಯನ್ನು ನೋಡಿದ್ದೇವೆ. ಇದ್ದಕ್ಕಿದ್ದಂತೆ ಡ್ರೈವರ್ ಸ್ಪೀಡ್ ಬೋಟ್ ಅನ್ನು ತಿರುಗಿಸಿದರು ಮತ್ತು ಕೆಲವೇ ಸೆಕೆಂಡ್ಗಳಲ್ಲಿ ಅದು ನಮ್ಮ ದೋಣಿಗೆ ಬಂದು ಡಿಕ್ಕಿ ಹೊಡೆಯಿತು ಎಂದು ಹೇಳಿದರು. ಅಪಘಾತ ಸಂಭವಿಸಿದಾಗ ದೋಣಿಯಲ್ಲಿದ್ದ ಅನೇಕ ಪ್ರಯಾಣಿಕರು ಲೈಫ್ ಜಾಕೆಟ್‌ಗಳನ್ನು ಧರಿಸಿರಲಿಲ್ಲ ಎಂದು ವರದಿಯಾಗಿದೆ.
ಡಿಕ್ಕಿಯಾದ ತಕ್ಷಣ ಸ್ಪೀಡ್ ಬೋಟ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ನಮ್ಮ ದೋಣಿಯ ಮೇಲೆ ಬಿದ್ದಿದ್ದಾರೆ. ದೋಣಿ ಸಾಮಾನ್ಯವಾಗಿ ಚಲಿಸುತ್ತಿದೆ ಮತ್ತು ನಾವು ಸುರಕ್ಷಿತವಾಗಿದ್ದೇವೆ ಎಂದು ನಾವು ಭಾವಿಸಿದ್ದೇವು. ಆದರೆ ಶೀಘ್ರದಲ್ಲೇ ದೋಣಿ ಮುಳುಗಲು ಪ್ರಾರಂಭಿಸಿತು. ಈ ಅಪಘಾತದಲ್ಲಿ ಅವರ ಚಿಕ್ಕಮ್ಮ ಮೃತಪಟ್ಟಿದ್ದಾರೆ ಎಂದು ಗೌರವ್ ಗುಪ್ತಾ ಹೇಳಿದರು.
ಬುಧವಾರ ಸಂಜೆ ಸುಮಾರು 4 ಗಂಟೆಗೆ ನೌಕಾಪಡೆಯ ಸ್ಪೀಡ್‌ಬೋಟ್ ಇಂಜಿನ್ ಪರೀಕ್ಷೆಗೆ ಮಾಡಲಾಗುತಿತ್ತು ಎಂದು ಹೇಳಲಾಗಿದೆ. ಸ್ಪೀಡ್‌ಬೋಟ್ ಕಾರಂಜಾ ಬಳಿ ಚಾಲಕನ ನಿಯಂತ್ರಣ ತಪ್ಪಿ ನೀಲಕಮಲ್ ಎಂಬ ಪ್ರಯಾಣಿಕ ದೋಣಿಗೆ ಡಿಕ್ಕಿ ಹೊಡೆದಿದೆ. ಗೇಟ್‌ವೇ ಆಫ್ ಇಂಡಿಯಾದಿಂದ ಜನಪ್ರಿಯ ಪ್ರವಾಸಿ ತಾಣವಾದ ಎಲಿಫೆಂಟಾ ಗುಹೆಗಳಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ದೋಣಿಯಲ್ಲಿ 80 ಮಂದಿ ಪ್ರಯಾಣಿಕರು ಹಾಗೂ 5 ಮಂದಿ ಸಿಬ್ಬಂದಿ ಇದ್ದರು ಎನ್ನಲಾಗಿದೆ. ಈ ಅಪಘಾತದಲ್ಲಿ ಇದುವರೆಗೆ 14 ಜನರು ಮೃತಪಟ್ಟಿದ್ದಾರೆ.(ಏಜೆನ್ಸೀಸ್)