'ಮುಂಬೈ ಬಾಯಿ' ಖತೀಜಾ ತಗುಲಾಕ್ಕೊಂಡ್ಳು!

Indo-Bangla-border
Published on

ಕೋಲ್ಕತ: ಹೆಸರು ಖತೀಜಾ ರಿಜ್ವಾನ್ ಶೇಖ್​. ಪತಿ ರಿಜ್ವಾನ್ ರಫೀವುಲ್ಲಾ ಶೇಖ್​. ಕಳೆದ 20 ವರ್ಷಗಳಿಂದ ಮುಂಬೈ ವಾಸಿಗಳು. ಭಾರತೀಯ ಪೌರರು. ಪಾನ್ ಕಾರ್ಡ್, ಆಧಾರ್ ಕಾರ್ಡ್​, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಎಲ್ಲವೂ ಇವೆ. ಆದ್ರೂ ಖತೀಜಾ ತಗುಲಾಕ್ಕೊಂಡ್ಳು!

ಮುಂಬೈನ ಖೇತ್ವಾಡಿಯಲ್ಲಿನ ಪಿ.ಬಿ. ಮಾರ್ಗ್ ವಿಳಾಸದಲ್ಲಿ ಅವರಿದ್ದಾರೆ. ಅವರಿದ್ದ ಪ್ರದೇಶದಲ್ಲಾಕೆ ಖತೀಜಾ ಬಾಯಿ ಎಂದೇ ಪರಿಚಿತಳು. ಕಳೆದ ಕೆಲವು ತಿಂಗಳಿಂದ ಅವಳು ನಾಪತ್ತೆ. ಎಲ್ಲಿ ಹೋಗಿದ್ದಾಳೆಂದು ಗೊತ್ತಿರಲಿಲ್ಲ. ಈ ಸಲ ಅಂದುಕೊಂಡಂತೆ ಹಿಂದಿರುಗಲಾಗಲಿಲ್ಲ. ಕೋವಿಡ್ ಕಾರಣಕ್ಕೆ ಎಲ್ಲರ ಲೆಕ್ಕಾಚಾರಗಳೂ ತಲೆಕೆಳಗಾಗಿದ್ದವು. ಹಾಗೆಯೇ ಖತೀಜಾ ಬಾಯಿಯ ಲೆಕ್ಕಾಚಾರವೂ ತಲೆಕೆಳಗಾಯಿತು ನೋಡಿ.

ಬಾಂಗ್ಲಾದೇಶದ ಬಾರ್ಡರ್​ನ ಕಳ್ಳದಾರಿ ಮೂಲಕ ಭಾರತದೊಳಕ್ಕೆ ನುಸುಳುವುದಕ್ಕೆ ಖತೀಜಾ ಹೊಂಚು ಹಾಕಿದ್ದಳು. ಕೆಲವು ದಿನಗಳಿಂದ ಅಂತಾರಾಷ್ಟ್ರೀಯ ಗಡಿಯಲ್ಲೇ ಸುಳಿದಾಡುತ್ತಿದ್ದಳು. ಹೋದ ದಾರಿಯಲ್ಲೇ ವಾಪಸ್ ಬರಲಾಗಲಿಲ್ಲ. ಮತ್ತೊಂದು ದಾರಿಯ ಮೂಲಕ ಒಳನುಸುಳುವುದಕ್ಕೆ ಯತ್ನಿಸುತ್ತಿದ್ದಳು. ಸಾಧ್ಯವಾಗದೇ ಇದ್ದಾಗ ಸ್ಥಳೀಯ ಕಳ್ಳಸಾಗಣೆದಾರರಾದ ಬಾಂಗ್ಲಾದೇಶದ ಮೊಂಟು ಮತ್ತು ಭಾರತದ ಬಾಬುವಿನ ನೆರವು ಯಾಚಿಸಿದ್ದಳು. ಅದರಂತೆ, ಶುಕ್ರವಾರ ರಾತ್ರಿ ನಾದಿಯಾದ ಹಝರಕಾಲ್ ಬಿಒಪಿ ಬಳಿ ತಡರಾತ್ರಿ ಬಿಎಸ್​ಎಫ್ ಯೋಧರು ಪಹರೆ ನಡೆಸುತ್ತ ಪಾಸ್ ಆದ ಬೆನ್ನಿಗೆ ಗಡಿ ದಾಟಿ ಬಂದು ಬಾರ್ಡರ್ ಸೆಕ್ಯೂರಿಟಿ ಫೋರ್ಸ್​ ಬಲೆಗೆ ಬಿದ್ದಳು. ಕಳ್ಳಸಾಗಣೆದಾರರಿಬ್ಬರೂ ತಪ್ಪಿಸಿಕೊಂಡಿದ್ದಾರೆ ಎಂದು ಬಿಎಸ್​ಎಫ್ ಮೂಲಗಳು ತಿಳಿಸಿವೆ.

ಈ ಬಂಧನದೊಂದಿಗೆ ಆಕೆಯ ಅಸಲೀಯತ್ತು ಬಹಿರಂಗವಾಗಿದೆ. ಖತೀಜಾ ಬಾಯಿ ಬಾಂಗ್ಲಾದೇಶದವಳು. 20 ವರ್ಷಗಳ ಹಿಂದೆ ಇದೇ ರೀತಿ ಕುಟುಂಬ ಸಮೇತ ಭಾರತಕ್ಕೆ ಬಂದು ಮುಂಬೈನಲ್ಲಿ ಕಾಯಂ ನಿವಾಸಿಗಳಾಗಿ ಬಿಟ್ಟಿದ್ದಾರೆ. ಪತಿಯೂ ಬಾಂಗ್ಲಾದೇಶೀಯ. ಪ್ರತಿ ವರ್ಷವೂ ಖತೀಜಾ ಬಾಂಗ್ಲಾದೇಶಕ್ಕೆ ಇದೇ ರೀತಿ ಕದ್ದು ಹೋಗಿ ಬರುತ್ತಿದ್ದಳು. ಆದರೆ ಈ ವರ್ಷ ಲೆಕ್ಕಾಚಾರ ತಲೆಕೆಳಗಾಗಿ ಕಳ್ಳಾಟಬಹಿರಂಗವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net