

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಸೋಲನ್ನು ಗೆಲುವಿನ ಮೆಟ್ಟಿಲಾಗಿಸಿ ಪ್ರಾಮಾಣಿಕ ಪ್ರಯತ್ನದಿಂದ ಮುಂದಡಿ ಇಟ್ಟರೆ ಯಶಸ್ಸು ಗಳಿಸಲು ಸಾಧ್ಯ ಎಂದು ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್ ಅಭಿಪ್ರಾಯಪಟ್ಟರು.
ದ.ಕ. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಮೂಲ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ಸಹಭಾಗಿತ್ವದಲ್ಲಿ 2025-26ನೇ ಸಾಲಿನ ಮೂಲ್ಕಿ ಹೋಬಳಿಮಟ್ಟದ 17ರ ವಯೋಮಾನದ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ರವೀಂದ್ರ ಶೇಟ್, ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಮಂಗಳೂರು ಉತ್ತರ ವಲಯದ ಕ್ರೀಡಾ ಸಮನ್ವಯಾಧಿಕಾರಿ ಭರತ್ ಕೆ., ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ನ ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.
ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಯೋಗಿನಿ ಅಧ್ಯಕ್ಷತೆ ವಹಿಸಿದ್ದರು. ಜಯಲಕ್ಷ್ಮೀ ಟಿ. ನಾಯಕ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸೀತಾಚಂದ್ರಿಕಾ ವಂದಿಸಿದರು. ಪ್ರೇಮಾ ಆರ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಂತ ಜೋಸೆಫರ, ಎಕ್ಕಾರು ಶಾಗೆೆ ಸಮಗ್ರ ಪ್ರಶಸ್ತಿ
ಬಾಲಕರ ವಿಭಾಗದಲ್ಲಿ ಬಜ್ಪೆ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಬಡಗ ಎಕ್ಕಾರು ಸರ್ಕಾರಿ ಪ್ರೌಢಶಾಲೆ ಮತ್ತು ಬಜ್ಪೆ ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಜಂಟಿಯಾಗಿ ಸಮಗ್ರ ಪ್ರಶಸ್ತಿ ಪಡೆದವು.