ತೆರಿಗೆ ಪಾವತಿ ವ್ಯವಸ್ಥೆ ಸರಿಯಿಲ್ಲ : ನೆಟ್ಟಣಿಗೆ ಮುಡ್ನೂರು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

Published on

ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ

ಹಲವಾರು ವರ್ಷಗಳಿಂದ ತೆರಿಗೆ ಪಾವತಿಸಿಕೊಂಡು ಬರುತ್ತಿದ್ದ ಹಲವು ಮನೆಯವರಿಗೆ ಈಗ ತೆರಿಗೆ ಪಾವತಿಸಲು ಸಾಧ್ಯವಾಗದೆ ಸಮಸ್ಯೆಯಾಗುತ್ತಿರುವ ವಿಚಾರವನ್ನು ನೆಟ್ಟಣಿಗೆ ಮುಡ್ನೂರು ಗ್ರಾಮಸ್ಥರು ಪ್ರಸ್ತಾಪಿಸಿ, ಆಕ್ರೋಶ ವ್ಯಕ್ತಪಡಿಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಈಶ್ವರಮಂಗಲದಲ್ಲಿರುವ ಕಾವು ಸಿ.ಎ ಬ್ಯಾಂಕ್‌ನ ಶಾಖಾ ಸಭಾಂಗಣದಲ್ಲಿ ಗ್ರಾಮಸಭೆ ನಡೆಯಿತು.

ಈ ಹಿಂದೆ ಇದ್ದ ತೆರಿಗೆ ವ್ಯವಸ್ಥೆಯನ್ನು ಬದಲಾಯಿಸಿ ಜನರಿಗೆ ಸಮಸ್ಯೆ ತಂದೊಡ್ಡಿರುವುದು ಯಾವ ನ್ಯಾಯ ಎಂದು ಗ್ರಾಮಸ್ಥ ಸೂಫಿ ಪ್ರಶ್ನಿಸಿದರು. ಧ್ವನಿಗೂಡಿಸಿದ ಖಾದರ್ ಕರ್ನೂರು, ಅಮರನಾಥ ಆಳ್ವ, ಭಾಸ್ಕರ್ ರೈ, ಕೊರಗಪ್ಪ ಮತ್ತಿತರರು ವ್ಯವಸ್ಥೆಯನ್ನು ಸರಿಪಡಿಸದಿರುವ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತೆರಿಗೆ ಪಾವತಿಸಲು ಅವಕಾಶ ವಂಚಿತರಾದವರಿಗೆ ತಂತ್ರಾಂಶದ ಮೂಲಕ ಸೇರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬೇರೆ ಗ್ರಾಮ ಪಂಚಾಯಿತಿಯವರು ಆ ವ್ಯವಸ್ಥೆಯನ್ನು ಮಾಡಿಕೊಂಡಿದ್ದರೂ ನಮ್ಮಲ್ಲಿ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಚರ್ಚಾ ನಿಯಂತ್ರಣಾಧಿಕಾರಿಯಾಗಿದ್ದರು. ಗ್ರಾಪಂ ಉಪಾಧ್ಯಕ್ಷ ರಾಮ ಮೇನಾಲ, ಸದಸ್ಯರಾದ ಶ್ರೀರಾಮ ಪಕ್ಕಳ, ರಮೇಶ್ ರೈ ಸಾಂತ್ಯ, ಕುಮಾರ್‌ನಾಥ್, ಇಬ್ರಾಹಿಂ ಪಳ್ಳತ್ತೂರು, ವೆಂಕಪ್ಪ ನಾಯ್ಕ, ಪ್ರದೀಪ್ ಕುಮಾರ್, ಲಲಿತಾ ಶೆಟ್ಟಿ, ಶಶಿಕಲಾ, ಇಂದಿರಾ, ವತ್ಸಲಾ, ಸವಿತಾ, ಪೂರ್ಣೇಶ್ವರಿ, ಸುಮಯ್ಯ, ಲಲಿತಾ ಸುಧಾಕರ್ ಉಪಸ್ಥಿತರಿದ್ದರು.

ಅಧಿಕಾರ ಮೊಟಕು ಆರೋಪ

ಈ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ಆಗುತ್ತಿದ್ದ 9/11ನ್ನು ಪುಡಾಗೆ ವರ್ಗಾಯಿಸುವ ಮೂಲಕ ಸರ್ಕಾರ ಗ್ರಾಮ ಪಂಚಾಯಿತಿ ಅಧಿಕಾರವನ್ನು ಮೊಟಕುಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಇದರಿಂದ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿದೆ. ಪುಡಾದಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ ಎಂದು ಖಾದರ್ ಕರ್ನೂರು ಆರೋಪಿಸಿದರು.

ಶಾಸಕರ ನೇತೃತ್ವದಲ್ಲಿ ಜನಸಂಪರ್ಕ ಸಭೆ

ದೊಡ್ಡ ಗ್ರಾಮವಾದ ನೆಟ್ಟಣಿಗೆ ಮುಡ್ನೂರಿನಲ್ಲಿ ಹಲವಾರು ಸಮಸ್ಯೆಗಳಿವೆ. ಆದ್ದರಿಂದ ಎಲ್ಲ ಇಲಾಖೆ ಅಧಿಕಾರಿಗಳನ್ನು ಸೇರಿಸಿ ಶಾಸಕರ ನೇತೃತ್ವದಲ್ಲಿ ಈಶ್ವರಮಂಗಲದಲ್ಲಿ ಜನಸಂಪರ್ಕ ನಡೆಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ.ಪಿ. ತಿಳಿಸಿದರು. ಗಾಳಿಮುಖದಿಂದ ಪುತ್ತೂರಿಗೆ, ಗಾಳಿಮುಖದಿಂದ ಕಾವು ಮೂಲಕವಾಗಿ ಸುಳ್ಯಕ್ಕೆ ಹಾಗೂ ಗಾಳಿಮುಖದಿಂದ ನೇರವಾಗಿ ಮಂಗಳೂರಿಗೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ತಪ್ಪು ಎಸಗಿದ್ದಕ್ಕಾಗಿ ಪಿಡಿಒ ವರ್ಗಾವಣೆ

ಹಿಂದಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಾಸ್ತವ್ಯದ ಮನೆಯೊಂದರ 9/11 ದಾಖಲೆಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೇರೊಬ್ಬರಿಗೆ ಕೊಟ್ಟಿದ್ದಾರೆ. ಅದು ಏನಾಗಿದೆ ಎಂದು ಅಮರನಾಥ ಆಳ್ವ ಪ್ರಶ್ನಿಸಿದರು. ಈ ವಿಚಾರ ಗೊತ್ತಾದ ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಲಾಗಿದೆ. ಪ್ರಕರಣ ಈಗ ಲೋಕಾಯುಕ್ತ ತನಿಖೆಯಲ್ಲಿದೆ ಎಂದು ಪಂಚಾಯಿತಿ ಅಧ್ಯಕ್ಷೆ ಫೌಝಿಯಾ ಉತ್ತರಿಸಿದರು. ಅಭಿವೃದ್ಧಿ ಅಧಿಕಾರಿ ಈ ರೀತಿಯ ತಪ್ಪು ಮಾಡುವಾಗ ಪಂಚಾಯಿತಿ ಪ್ರತಿನಿಧಿಗಳು ಏನು ಮಾಡುತ್ತಿದ್ದರು ಎಂಬ ಅಸಮಾಧಾನ ವ್ಯಕ್ತವಾಯಿತು. ಈ ವಿಚಾರ ಲೋಕಾಯುಕ್ತದಲ್ಲಿದ್ದು, ತನಿಖೆ ನಡೆಯುತ್ತಿದೆ ಎಂದು ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ.ಪಿ. ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net