

ಮುದ್ದೇಬಿಹಾಳ: ಕರೊನಾ ಹಾವಳಿ ಮಧ್ಯೆ ಸಂಪೂರ್ಣ ಸ್ಥಗಿತವಾಗಿರುವ ಮಂಟಪ, ಡೆಕೋರೇಟರ್ಸ್ ಸಂಬಂಧಿತ ಕಾರ್ಮಿಕರ ಪರವಾಗಿ ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಟ್ಟರೆ ಇನ್ನುಳಿದ ಜನಪ್ರತಿನಿಧಿಗಳು ಧ್ವನಿ ಎತ್ತುವ ಕೆಲಸ ಮಾಡಿಲ್ಲ ಎಂದು ಶಾಮಿಯಾನ್ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ ಹಿರೇಮಠ ಆರೋಪಿಸಿದರು.
ಪಟ್ಟಣದ ಹುಡ್ಕೋದ ಸಭಾಭವನದ ಕಬೀರ್ ಹುಸೇನ್ ವೇದಿಕೆಯಲ್ಲಿ ಬುಧವಾರ ವಿಜಯಪುರ ಜಿಲ್ಲಾ ಮಂಟಪ ಮೈಕ್ ಲೈಟ್ ಮತ್ತು ್ಲಾವರ್ ಡೆಕೋರೇಟರ್ಸ್ ಮಾಲೀಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 23ನೇ ವಾರ್ಷಿಕ ಸ್ನೇಹ ಸಮ್ಮೇಳನ-2020 ಹಾಗೂ ತಾಲೂಕು ಪ್ರಥಮ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಪ್ರತಿನಿಧಿಗಳು ಹೇಳಿದಂತೆ ನಾವು ಕೆಲಸ ಮಾಡುತ್ತೇವೆ. ಆದರೆ, ನಮ್ಮ ಕಷ್ಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸದೆ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವಂತೆ ಸಿಎಂ ಯಡಿಯೂರಪ್ಪನವರನ್ನು ಭೇಟಿಯಾದಾಗ ನಿಮಗೆ ಒಳ್ಳೆಯ ದಿನಗಳು ಬರಲಿವೆ ಕಾಯಿರಿ ಎಂದು ಹೇಳಿದ್ದರು. ಆದರೆ, ಆರು ತಿಂಗಳು ಕಳೆದರೂ ನಮಗೆ ಒಳ್ಳೆಯ ದಿನಗಳು ಬಂದಿಲ್ಲ. ಸರ್ಕಾರ ಅನುಮತಿ ನೀಡಲಿ ಬಿಡಲಿ ಯುಗಾದಿ ದಿನದಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ಮಂಟಪದ ಸೇವೆ ನೀಡುವ ಕಾರ್ಯವನ್ನು ಸಂಘಟನೆಯಿಂದ ಮಾಡುತ್ತೇವೆ ಎಂದರು.
ಆಹಾರ ಪೂರೈಕೆ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರೊನಾ ಸಂಕಷ್ಟದ ಮಧ್ಯೆಯೂ ದೇಶದ ಜಿಎಸ್‌ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ.ಗಳಿಗೇರಿದೆ. ರೈತರನ್ನು ಸಬಲಗೊಳಿಸುವ ಕಾರ್ಯದಲ್ಲಿ ನಾನು ತೊಡಗಿಕೊಂಡಿದ್ದೇನೆ. ನಿಮ್ಮ ಸಮಸ್ಯೆಗೆ ಧ್ವನಿಯಾಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕುಂಟೋಜಿ ಹಿರೇಮಠದ ಚನ್ನವೀರ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮಂಟಪ, ಡೆಕೋರೇಟರ್ಸ್ ಬೆನ್ನಿಗೆ ಜನಪ್ರತಿನಿಧಿಗಳು ನಿಲ್ಲದಿದ್ದರೂ ದೈವ ಜತೆಗೆ ಇದೆ. ಯಾವತ್ತೂ ನಿಮ್ಮದು ಬೇಡುವ ಕೈ ಆಗದೆ ಕೊಡುವ ಕೈ ಆಗಲಿ ಎಂದು ತಿಳಿಸಿದರು.
ಮೌಲಾನಾ ಅಲ್ಲಾಭಕ್ಷ ಖಾಜಿ, ಜಿಲ್ಲಾ ಗೌರವಾಧ್ಯಕ್ಷ ಮಹಿಬೂಬ್ ಮುಲ್ಲಾ, ತಾಳಿಕೋಟೆ ತಾಲೂಕಾಧ್ಯಕ್ಷ ಶಫೀಕ್ ಮುರಾಳ(ಭಾರತ್) ಮಾತನಾಡಿದರು.
ಮುಖಂಡರಾದ ರಫೀಕ್ ಪುಣೇಕರ್, ಗಣಪತಿ ಮಹಟಿಕರ, ಜಿಲ್ಲಾಧ್ಯಕ್ಷ ಅಜೀಜ್ ಡಾಲಾಯತ್, ಶಾಂತಯ್ಯ ಹಿರೇಮಠ, ಮುದ್ದೇಬಿಹಾಳ ತಾಲೂಕು ಅಧ್ಯಕ್ಷ ಯಾಸೀನ್ ಸೋಠೆ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ಮುಖಂಡ ಚಿನ್ನು ನಾಡಗೌಡ, ನಿಡಗುಂದಿ ತಾಲೂಕಾಧ್ಯಕ್ಷ ಶಬ್ಬೀರ್ ಗೋಟೇದ, ಬ. ಬಾಗೇವಾಡಿ ತಾಲೂಕಾಧ್ಯಕ್ಷ ಲಕ್ಷ್ಮಣ ಅಂಬಿಗೇರ, ಸಿಂದಗಿ ತಾಲೂಕಾಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಶಬ್ಬೀರ್‌ಅಹ್ಮದ ಮಕಾನದಾರ, ಮಹ್ಮದರಫೀಕ್ ಬಿದರಿ ಮತ್ತಿತರರಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಡಿ.ಬಿ. ವಡವಡಗಿ, ಗಾಯಕ ಸಂಗಮೇಶ ಶಿವಣಗಿ, ಭರತನಾಟ್ಯ ಕಲಾವಿದೆ ಶ್ರೀದೇವಿ ರೂಢಗಿ ಅವರನ್ನು ಸನ್ಮಾನಿಸಲಾಯಿತು. ಶಫೀಕ್ ಮುರಾಳ ಸ್ವಾಗತಿಸಿದರು. ಗೋಪಾಲ ಹೂಗಾರ ನಿರೂಪಿಸಿದರು.
ಕರೊನಾ ಸಂಕಷ್ಟದ ಸಮಯದಲ್ಲಿ ಶಾಮಿಯಾನ್, ಡೆಕೋರೇಟರ್ಸ್ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದವರು ಬರಲಿಲ್ಲ. ನಾವು ಯಾವ ವಲಯದಲ್ಲಿ ಬರುತ್ತೇವೆ ಎಂಬುದೂ ನಮಗೆ ತಿಳಿಯುತ್ತಿಲ್ಲ. ಈ ಕ್ಷೇತ್ರದಲ್ಲಿ ದುಡಿಯುವ ಬಡವರಿಗೆ ಸರ್ಕಾರ ನೆರವು ನೀಡಬೇಕು. ಮಹೆಬೂಬ್ ಮುಲ್ಲಾ, ಶಾಮಿಯಾನ್ ಸಂಘದ ಜಿಲ್ಲಾ ಗೌರವಾಧ್ಯಕ್ಷ