ಮುಡಾ ಹಗರಣ: ಸಿಎಂ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದು!

muda case
Published on

ಮೈಸೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ, ಜಾರಿ ನಿರ್ದೇಶನಾಲಯ ಎಫ್‌ಐಆರ್‌ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೇರಿದ್ದ 14 ನಿವೇಶನಗಳ ಖಾತೆಯನ್ನು ಮುಡಾ ರದ್ದುಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರೇ ಇಂದು (ಅಕ್ಟೋಬರ್ 01) ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ.

ಈ ಸಂಬಂಧ ಮುಡಾ ಆಯುಕ್ತರ ರಘುನಂದನ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 14 ನಿವೇಶನಗಳು ಮುಡಾಗೆ ವಾಪಸ್​ ಆಗಿದ್ದು, ಈಗ 14 ಸೈಟ್​ಗಳ ಕ್ರಯಪತ್ರ ರದ್ದಾಗಿದೆ. ಅವರು ಸ್ವಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ಒಂದು ದಿನದ ಹಿಂದೆಯಷ್ಟೇ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮ್ಮ ಜಮೀನಿಗೆ ಬದಲಿಯಾಗಿ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ನೀಡಲಾಗಿದ್ದ 14 ಸೈಟ್​ಗಳನ್ನು ವಾಪಸ್‌ ಪಡೆಯುವಂತೆ ಪತ್ರದಲ್ಲಿ ಮುಡಾ ಆಯುಕ್ತರಿಗೆ ಮನವಿ ಮಾಡಿದ್ದರು. ಪತ್ರ ಬರೆದ ಮರುದಿನವೇ ಮುಡಾ 14 ನಿವೇಶನಗಳ ಖಾತೆಯನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net