

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ (ಆ.19) ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಮುಡಾ ಹಗರಣ ಸಂಕಷ್ಟದಿಂದ ಪಾರಾಗಲು ಕಾನೂನು ಹೋರಾಟಕ್ಕೆ ಮುಂದಾಗಿರುವ ಸಿಎಂ ಸಿದ್ದು, ತಮ್ಮ ಆಪ್ತರು, ಸಚಿವರು ಹಾಗೂ ವಕೀಲರ ಜತೆ ಸಮಾಲೋಚನೆ ನಡೆಸಿ, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ರಿಟ್ ಅರ್ಜಿಯಲ್ಲಿ ಏನಿದೆ?
ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಕಾನೂನು ಬಾಹಿರವಾಗಿದೆ. ಭ್ರಷ್ಟಾಚಾರ ಕಾಯ್ದೆ 17ಎ ಅಡಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ನಿಯಮಗಳ ಉಲ್ಲಂಘನೆಯಾಗಿದೆ. ಪ್ರಾಸಿಕ್ಯೂಷನ್ ನೀಡುವ ಬಗ್ಗೆ 2021ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರ್ಕಾರ ನೀಡಿರುವ ಚೆಕ್‌ಲಿಸ್ಟ್ ಅನ್ನು ಪಾಲನೆ ಮಾಡಿಲ್ಲ. ಇದರ ಪ್ರಕಾರ ಮೊದಲು ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳು ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಬೇಕು. ಆದರೆ, ಈ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳ ದೂರಿನ ಆಧಾರದ ಮೇಲೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಲಾಗಿದೆ. ರಾಜ್ಯಪಾಲುರು ಅನುಮತಿ ನೀಡುವ ಮುನ್ನ ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸಿಲ್ಲ ಎಂದು ಸಿದ್ದರಾಮಯ್ಯ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಅರ್ಜಿಯಲ್ಲಿ ಮೂವರು ದೂರುದಾರರನ್ನು ಪ್ರತಿವಾದಿಗಳನ್ನಾಗಿ ಹೆಸರಿಸಿದ್ದಾರೆ.
ಇಂದು ಮಧ್ಯಾಹ್ನ ವಿಚಾರಣೆ
ಈ ಪ್ರಕರಣದಲ್ಲಿ ತುರ್ತು ವಿಚಾರಣೆಗೆ ಒಪ್ಪಿರುವ ಕರ್ನಾಟಕ ಹೈಕೋರ್ಟ್ ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸಲು ಒಪ್ಪಿದೆ. ಸಿಎಂ ಪರ ವಕೀಲ ರವಿವರ್ಮ ಕುಮಾರ್ ಅವರು ವಾದ ಮಂಡನೆ ಮಾಡಲಿದ್ದಾರೆ. ನ್ಯಾಯಮೂರ್ತಿ ಹೇಮಂತ್ ಕುಮಾರ್ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ಹಿರಿಯ ವಕೀಲರುಗಳಾದ ಕಪಿಲ್ ಸಿಬಲ್, ಅಭಿಷೇಕ್ ಮನು ಸಿಂಗ್ವಿ ಹಾಗೂ ಪ್ರಶಾಂತ್ ಭೂಷಣ್ ಬೆಂಗಳೂರಿಗೆ ಬಂದಿಳಿದಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಮಂತ್ರಾಲಯ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ, ಪ್ರವಾಸವನ್ನು ರದ್ದು ಮಾಡಿ ಬೆಂಗಳೂರಿನಲ್ಲೇ ಉಳಿದುಕೊಂಡು ವಕೀಲರುಗಳ ಜತೆ ಚರ್ಚೆ ನಡೆಸಿ, ಕಾನೂನು ಹೋರಾಟದಲ್ಲಿ ಬಿಜಿಯಾಗಿದ್ದಾರೆ.
ಏನಿದು ಮುಡಾ ಅಕ್ರಮ ಪ್ರಕರಣ: ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 50-50 ಅನುಪಾತದಲ್ಲಿ 14 ಮುಡಾ ಸೈಟ್‌ಗಳನ್ನ ಹಂಚಿಕೆ ಮಾಡಲಾಗಿದೆ ಅನ್ನೋ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಎಂಬುವವರು ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಿಎಂ ಪತ್ನಿಗೆ 14 ನಿವೇಶನ ಮಂಜೂರಾದ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ದಾಖಲೆಗಳ ಜೊತೆ ಆರೋಪಿಸಿರುವ ಆರ್.ಟಿ.ಐ ಕಾರ್ಯಕರ್ತ ಗಂಗರಾಜು ಅವರು, ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಬದಲಿ ನಿವೇಶನ ನೀಡಿ ಲಾಭ ಮಾಡಿಕೊಟ್ಟಿರುವುದು ನಿಜ. ಮೈಸೂರಿನ ಕೆಸರೆ ಸರ್ವೇ ನಂಬರ್ 464 ವ್ಯಾಪ್ತಿಯಲ್ಲಿ 3.16 ಗಂಟೆ ಜಾಮೀನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದಕ್ಕೆ ಪರ್ಯಾಯವಾಗಿ ವಿಜಯನಗರದ ಬಡಾವಣೆಯಲ್ಲಿ 14 ನಿವೇಶನವನ್ನು ಸಿಎಂ ಪತ್ನಿಯ ಹೆಸರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದರು.
ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ?: ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮುಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಡಾದ 50:50 ಹಗರಣದಲ್ಲಿ ಅವರು ಸಿಎಂ ಪತ್ನಿಯು ಭಾಗಿಯಾಗಿದ್ದಾರೆ ಎಂದು ಗಂಗರಾಜು ಹೇಳಿದ್ದರು.
ಮುಡಾ ವಿರುದ್ಧದ ಆರೋಪವೇನು? : ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38ಸಾವಿರದ 284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ, 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪವಾಗಿದೆ. ದೇವನೂರು ಬಡಾವಣೆಯಲ್ಲಿ ಸಾವಿರಾರು ಸೈಟ್ ಇದ್ದರೂ ವಿಜಯನಗರದಲ್ಲಿ ಕೊಟ್ಟಿರುವುದು ಯಾಕೆ? ಇದು ಲಾಭದ ಉದ್ದೇಶ ಅಲ್ಲವೇ. ಈ ಹಿಂದಿನ ಮೂಡಾ ಆಯುಕ್ತ ನಟೇಶ್ ಈ ಆದೇಶ ಮಾಡಿದ್ದು, ಸಿಎಂ ಪತ್ನಿ ಆರ್ಥಿಕ ಲಾಭವನ್ನು ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.