Muda Case | ರಾಜಕೀಯ ಕುರುಕ್ಷೇತ್ರಕ್ಕೆ ನಾವು ತಯಾರಿದ್ದೇವೆ; ಸಿಟಿ ರವಿ ಸವಾಲು

bjp mlc c t ravi
Published on

ಬೆಂಗಳೂರು: ರಾಜಕೀಯ ಕುರುಕ್ಷೇತ್ರಕ್ಕೆ ನಾವು ತಯಾರಿದ್ದೇವೆ. ಮುಡಾ ಹಗರಣಕ್ಕೆ muda case ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಅಥವಾ ಸರ್ಕಾರ ವಿಸರ್ಜನೆ ಮಾಡಿ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಸಿಟಿ ರವಿ ಸವಾಲು ಹಾಕಿದರು.

ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಹಬ್ಬತ್ ಕಿ ದುಖಾನ್ ಎಂದು ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಭ್ರಷ್ಟಾಚಾರದ ಶಾಪಿಂಗ್ ಮಾಲ್ ತೆರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರದ ಮುಖವಾಡ ಹೊರಬೀಳುವ ಭಯದಿಂದ ಸಿಬಿಐ ತನಿಖೆ ಹಿಂಪಡೆಯುವ ನಿರ್ಣಯ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ಮತ್ತು ಭ್ರಷ್ಟರು ಮಾತ್ರ ಮಾಡುವ ಕೆಲಸ. ರಾಜ್ಯಪಾಲರ ಪತ್ರಕ್ಕೆ ಕೇವಲ ಸಂಪುಟದ ನಿರ್ಣಯದ ಮೂಲಕ ಮಾತ್ರ ಉತ್ತರಿಸಬೇಕೆಂಬ ತೀರ್ಮಾನ ಹಾಸ್ಯಾಸ್ಪದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ, ಡಿಕೆಶಿ ರಾಜ್ಯಪಾಲರ ಕ್ಷಮೆಯಾಚಿಸಲಿ Muda case

ಹೈಕೋರ್ಟ್ ನ್ಯಾಯಾಧೀಶರು ರಾಜ್ಯಪಾಲರ ಆದೇಶವನ್ನು ಎತ್ತಿ ಹಿಡಿದು ಕಾನೂನಿನ ದೃಷ್ಟಿಯಲ್ಲಿ ಸಿದ್ದರಾಮಯ್ಯನವರು ಸೇರಿ ಎಲ್ಲರೂ ಸಮಾನರು ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಕಾಂಗ್ರೆಸಿಗರು ರಾಜ್ಯಪಾಲರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ತನಿಖೆಯೇ ಆಗದಂತೆ ಮುನ್ನೆಚ್ಚರಿಕೆ ವಹಿಸಿ ನಾನು ಪ್ರಾಮಾಣಿಕ ಎಂದು ಅವರಿಗೆ ಅವರೇ ಹೇಳಿಕೊಳ್ಳುತ್ತಿದ್ದಾರೆ. ಈಗ ಸಿಬಿಐಗೆ ಇದ್ದ ಮುಕ್ತ ತನಿಖೆಯ ಅಧಿಕಾರವನ್ನು ನಿನ್ನೆಯ ಸಂಪುಟ ಸಭೆ ಮೊಟಕು ಮಾಡಿದೆ. ನೀವು ಪ್ರಾಮಾಣಿಕರಿದ್ದರೆ ನಿಮಗೆ ಸಿಬಿಐ ತನಿಖೆ ಮಾಡಿದರೆ ಭಯ ಏಕೆ? ನೀವು ಮತ್ತು ನಿಮ್ಮ ಸರ್ಕಾರ ಪರಮಭ್ರಷ್ಟ ಸರ್ಕಾರ ಎಂಬುದನ್ನು ನಿಮ್ಮ ನಿಲುವೇ ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ವಿರುದ್ಧ 65ಕ್ಕೂ ಪ್ರಕರಣಗಳ ದೂರು ಸಲ್ಲಿಕೆಯಾಗಿವೆ. ಆ ದೂರುಗಳ ಸತ್ಯಾಸತ್ಯತೆ ಹೊರಕ್ಕೆ ಬರಬಾರದು ಎಂದು ಲೋಕಾಯುಕ್ತವನ್ನು ದುರ್ಬಲಗೊಳಿಸಿ, ಎಸಿಬಿ ರಚನೆ ಮಾಡಿಕೊಂಡು 15ಕ್ಕೂ ಹೆಚ್ಚು ಪ್ರಕರಣಗಳಿಗೆ ತನ್ನ ಅಧೀನದ ಎಸಿಬಿಯಲ್ಲಿ ಕ್ಲೀನ್ ಚಿಟ್ ಪಡೆದಿದ್ದಾರೆ ಎಂದು ದೂರಿದರು. 50ಕ್ಕೂ ಹೆಚ್ಚು ಪ್ರಕರಣಗಳ ತನಿಖೆಯೇ ಆಗಿಲ್ಲ ಎಂದು ಆರೋಪಿಸಿದರು.

ಸಚಿವ ಸಂಪುಟದಿಂದ ಜಮೀರ್​ನನ್ನು ವಜಾ ಮಾಡಿ

ಹೈಕೋರ್ಟ್ ತೀರ್ಪನ್ನು ಜಮೀರ್ ಅಹ್ಮದ್ ಅವರು ರಾಜಕೀಯ ತೀರ್ಪು ಎಂದಿದ್ದಾರೆ. ನ್ಯಾಯಾಲಯವನ್ನೂ ಅಪನಂಬಿಕೆಯಿಂದ ನೋಡುವುದು ಕಾಂಗ್ರೆಸ್ಸಿಗೆ ಹೊಸದೇನೂ ಅಲ್ಲ. ಸಂವಿಧಾನ ಗೌರವಿಸುವವರು ಆಡುವ ಮಾತು, ನಡವಳಿಕೆ ಇದಲ್ಲ. ಜಮೀರ್ ಅಹ್ಮದ್ ಯಾವ ಹಿನ್ನೆಲೆಯಲ್ಲಿ ಈ ಹೇಳಿಕೆ ಕೊಟ್ಟರು ಎಂದು ಪ್ರಶ್ನಿಸಿದ ಸಿ.ಟಿ.ರವಿ ಅವರು, ಜಮೀರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಲು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇರಿದಂತೆ ಕಾಂಗ್ರೆಸ್ ಪಕ್ಷವು ಭಯಭೀತ ಸ್ಥಿತಿಯಲ್ಲಿದೆ. ತಮ್ಮ ಬಂಡವಾಳ, ಭ್ರಷ್ಟಾಚಾರ ಹೊರಕ್ಕೆ ಬರಬಾರದು ಎಂಬ ಕಾರಣಕ್ಕೋಸ್ಕರವೇ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ನ್ಯಾಯಾಲಯದ ಆದೇಶಗಳು ಇವರ ಸಾರ್ವಜನಿಕ ಕ್ಷೇತ್ರದ ಬಿಳಿ ಬಟ್ಟೆ ಮೇಲಿನ ಕಳಂಕ ಆಡಳಿತ, ಭ್ರಷ್ಟಾಚಾರವನ್ನು ಬಯಲು ಮಾಡಿವೆ. ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟ ಕಾರಣಕ್ಕೆ ಅವರ ವಿರುದ್ಧ ಹೀನಾಯವಾಗಿ ಟೀಕೆ ಮಾಡಿದರು. ಚಳವಳಿ ಮಾಡಿದ್ದರು. ಕೆಲವರು ಬಾಂಗ್ಲಾ ಮಾದರಿ ಹೋರಾಟ ಆಗುತ್ತದೆ ಎಂದು ಎಚ್ಚರಿಸಿದ್ದರು. ಸಂವಿಧಾನ- ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ವರ್ತನೆ ಇತ್ತು. ನಾವು ಕಾನೂನಿಗಿಂತ ಮೇಲು ಎಂಬ ಅಹಂಕಾರದ ಭಾವನೆ ಇತ್ತು ಎಂದು ವಿಶ್ಲೇಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net