

ಮೈಸೂರು: ಮೂಡಾ ಪ್ರಕರಣದಲ್ಲಿ Muda case ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಿಎಂ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ)ಗೂ ದೂರು ನೀಡಿದ್ದಾರೆ. ಆ ಮೂಲಕ ಸಿಎಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
59 ಕೋಟಿ ರೂ. ಮೌಲ್ಯದ 14 ಸೈಟುಗಳ ಹಗರಣದಲ್ಲಿ ತನಿಖೆ ನಡೆಸಬೇಕು ಅಂತ ಜಾರಿ ನಿರ್ದೇಶನಾಲಯಕ್ಕೆ ಇ-ಮೇಲ್ ಮೂಲಕ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ಮುಡಾದಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಇಡಿಗೆ 16 ಪುಟಗಳ ಇ-ಮೇಲ್ ಹಾಗೂ ಪತ್ರ ಬರೆಯುವ ಮೂಲಕ ಇಡಿ ಬೆಂಗಳೂರು ನಿರ್ದೇಶಕರಿಗೆ ದೂರು ನೀಡಿದ್ದಾರೆ. ಮನಿ ಲ್ಯಾಂಡರಿಂಗ್ ಆ್ಯಕ್ಟ್ ಮೂಲಕ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರೇ ಎ-1 ಆರೋಪಿಯಾಗಿದ್ದು, ತನಿಖೆಯ ಟೆನ್ಷನ್ ಶುರುವಾಗಿದೆ. ಶನಿವಾರ – ಭಾನುವಾರ ಲೋಕಾಯುಕ್ತ ಕಚೇರಿಗೆ ರಜೆ ಇರುವ ಕಾರಣದಿಂದ ಸೋಮವಾರದಿಂದ ಅಧಿಕೃತ ತನಿಖೆ ಶುರುವಾಗಲಿದೆ. ಇಂದು ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಬ್ಬಂದಿ ಸಭೆ ನಡೆಸಿದ ಎಸ್‌ಪಿ ಉದೇಶ್, ತನಿಖೆಗಾಗಿ ನಾಲ್ಕು ತಂಡ ರಚನೆ ಮಾಡಿದ್ದಾರೆ.
ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್, ಡಿವೈಎಸ್ಪಿ ಮಾಲತೀಶ್, ಚಾಮರಾಜನಗರ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಹಾಗೂ ಇನ್ಸ್ಪೆಕ್ಟರ್ ಒಳಗೊಂಡ ನಾಲ್ಕು ತನಿಖಾ ತಂಡಗಳ ರಚನೆ ಮಾಡಲಾಗಿದೆ.
ಮೂರು ತಿಂಗಳೊಳಗೆ ಕೋರ್ಟ್ಗೆ ತನಿಖಾ ವರದಿ ಸಲ್ಲಿಸಬೇಕಾಗಿರುವುದರಿಂದ ತನಿಖೆ ಸ್ವಲ್ಪ ವೇಗವಾಗಿ ನಡೆಯಲಾಗುತ್ತಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ನಿನ್ನೆಯಿಂದಲೂ ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಕಾನೂನು ಹೋರಾಟ ಆರಂಭಿಸಿದ್ದು ಮೈಸೂರಿನ ನಿವಾಸದಲ್ಲಿ ವಕೀಲರು, ಕಾನೂನು ಸಲಹೆಗಾರ ಪೊನ್ನಣ್ಣ, ಸಚಿವ ಬೈರತಿ ಸುರೇಶ್ ಜೊತೆ ಚರ್ಚೆ ನಡೆಸಿದ್ದಾರೆ.
mus