

ಮಂಗಳೂರು: ಮುಡಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವುದು ಉಚಿತ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಹಿಂದೆ ರೈಲ್ವೆ ಸಚಿವರಾಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅಪಘಾತ ಮಾಡಿದಾಗ ರಾಜೀನಾಮೆ ನೀಡಿದ್ದರು. ರಾಜೀನಾಮೆ ಕೊಡಬೇಕೋ, ಕೊಡಬೇಡವೋ ಅನ್ನೋದು ಅವರಿಗೆ ಬಿಟ್ಟಿದ್ದು. ಇಂತಹ ಗಂಭೀರ ಆರೋಪ ಕೇಳಿಬಂದಾಗ ರಾಜೀನಾಮೆ ಕೊಡಬೇಕು. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ಅನಿಸಿದಾಗ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ತಾವೇನು ತಪ್ಪೇ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ಈಗ ಆರೋಪಗಳಿಗೆ ಸಂಬಂಧಿಸಿ ಪುರಾವೆಗಳು ಇವೆ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದ ತನಿಖೆ ಮಾಡುವ ಏಜೆನ್ಸಿ ಯಾವ ನಿರ್ಣಯಕ್ಕೆ ಬರುತ್ತದೆ ಎಂಬುದರ ಮೇಲೆ ಪ್ರಕರಣದ ಅಂತ್ಯ ಕಾಣುತ್ತದೆ. ಸದ್ಯ ಗಂಭೀರವಾದ ಆರೋಪ ಬಂದ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡಬೇಕು ಅಂತಾ ನನಗೆ ಅನ್ನಿಸುತ್ತಿದೆ. ರಾಜೀನಾಮೆ ಕೊಡಬೇಕು ಅನ್ನೋದು ಈಗ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.
ಅಕ್ರಮ ಮುಡಾ ಸೈಟ್ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ. 82ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಈ ಮಹತ್ವದ ಸೂಚನೆ ನೀಡಿದ್ದಾರೆ. ಮೈಸೂರು ಲೋಕಾಯುಕ್ತಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ನಿರ್ದೇಶನ ನೀಡಿದೆ.
CRPC ಸೆಕ್ಷನ್ 156(3) ಅಡಿ ಕೇಸ್ ರಿಜಿಸ್ಟರ್ ಮಾಡಲು ಆದೇಶ ನೀಡಲಾಗಿದ್ದು, ತನಿಖಾ ವರದಿ ನೀಡಲು 3 ತಿಂಗಳ ಗಡುವು ನೀಡಲಾಗಿದೆ. ಅಂದ್ರೆ ಡಿಸೆಂಬರ್ 24 2024ಕ್ಕೆ ತನಿಖಾ ವರದಿ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸೂಚನೆ ನೀಡಿದೆ.