

ಚಾತುರ್ಮಾಸ್ಯದ ಸಂದರ್ಭದಲ್ಲಿ ಕೃಷ್ಣನ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ. ಹೀಗಾಗಿ ಉಡುಪಿಯ ಕಡಗೋಲು ಶ್ರೀಕೃಷ್ಣನ ಮಾದರಿಯಲ್ಲೇ ಮಣ್ಣಿನಿಂದ ತಯಾರಿಸಿದ ಶ್ರೀಕೃಷ್ಣನ ಮೂರ್ತಿಯನ್ನು ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಲೀಲೋತ್ಸವದಲ್ಲಿ ಪೂಜಿಸುವುದು ವಿಶೇಷ.
ಉಡುಪಿ ಮಠದಲ್ಲಿ ಸೌರಮಾನ ಪದ್ಧತಿಯಲ್ಲಿ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ರೋಹಿಣಿ ನಕ್ಷತ್ರದ ಅಷ್ಟಮಿಯ ದಿನ ಸಿಂಹ ಮಾಸದಲ್ಲಿ ಕೃಷ್ಣನ ಜನಿಸಿದ್ದಾನೆಂಬ ಪ್ರತೀತಿಯಂತೆ ಸಾಂಪ್ರದಾಯಿಕವಾಗಿ ಅಷ್ಟಮಿ, ಲೀಲೋತ್ಸವ ಆಚರಿಸಲಾಗುತ್ತಿದೆ. ಎರಡು ದಿನ ಮಠದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಬಹಳ ಶ್ರೇಷ್ಠವಾದುದು. ಶಾಸ್ತ್ರದ ಪ್ರಕಾರ ಅದೊಂದು ದೊಡ್ಡ ವ್ರತವಾಗಿದ್ದು, ಆಚರಣೆಯಿಂದ ವಿಶೇಷ ಫಲ ಲಭಿಸಲಿದೆ. ದ್ವಾಪರ ಯುಗದ ಅಂತ್ಯ ಹಾಗೂ ಕಲಿಯುಗದ ಆರಂಭದಲ್ಲಿ ಜನರ ಉದ್ಧಾರಕ್ಕಾಗಿಯೇ ಭಗವಂತ ಶ್ರೀಕೃಷ್ಣನ ರೂಪದಲ್ಲಿ ಅವತರಿಸಿದ್ದಾನೆ. ಸಜ್ಜನರ ರಕ್ಷಣೆಗೆ ಬಂದಿರುವ ಆತನಿಗಾಗಿ ಆರಾಧನೆ, ಉಪವಾಸ ವ್ರತ ಮಾಡುವುದು ನಮ್ಮೆಲ್ಲರ ಕರ್ತವ್ಯ. ನಿತ್ಯವೂ ಭಗವದ್ಗೀತೆಯ ಪಠಣ, ಲೇಖನದಲ್ಲಿ ತೊಡಗಿದರೆ ಅದುವೇ ಶ್ರೀಕೃಷ್ಣನಿಗೆ ನಾವು ಕೊಡುವ ಉತ್ತಮ ಗಿಫ್ಟ್ ಆಗಲಿದೆ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ ಜನ್ಮಾಷ್ಟಮಿಯ ಮೃಣ್ಮಯ ಮೂರ್ತಿಯನ್ನು ನನ್ನ ತಂದೆ ನಿರ್ಮಿಸುತ್ತಿದ್ದರು. ಅವರ ನಂತರ 25 ವರ್ಷದಿಂದ ನಾನು ತಯಾರಿಸುತ್ತಿದ್ದೇನೆ. ನನ್ನ ತಮ್ಮನೂ ಸಹ ಸಿದ್ಧಪಡಿಸುತ್ತಾನೆ. 9 ಇಂಚ್ನ ಈ ಮೂರ್ತಿಯಲ್ಲಿ ಕಡಗೋಲು ಹಾಗೂ ಹಗ್ಗದ ಸಹಿತವಾಗಿ ಅತ್ಯಂತ ಸೂಕ್ಷ್ಮವಾಗಿ ಆವೆ ಮಣ್ಣಿನಿಂದ ಸಿದ್ಧಪಡಿಸಬೇಕಾಗುತ್ತದೆ. ಇದನ್ನು ಸೇವಾರ್ಥವಾಗಿ ಮಾಡುತ್ತಿದ್ದು, ಈ ಕಾರ್ಯ ಹೆಮ್ಮೆ ತರುತ್ತದೆ. | ಸೋಮನಾಥ ಚಿಟ್ಪಾಡಿ. ಕಲಾವಿದ