

MS Dhoni: ಪ್ರಸಕ್ತ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ 18ನೇ ಆವೃತ್ತಿ ಇದೀಗ ಕೊನೆ ಹಂತಕ್ಕೆ ಸನ್ನಿಹಿತವಾಗಿದ್ದು, ಪ್ಲೇಆಫ್ ಪಂದ್ಯಗಳಿಗೆ ದಿನಗಣನೆ ಆರಂಭಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಈಗಾಗಲೇ ಪ್ಲೇಆಫ್ಗೆ ಲಗ್ಗೆಯಿಟ್ಟಿವೆ. ಈ ಮಧ್ಯೆ 18ನೇ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆ ಸ್ಥಾನವನ್ನು ಅಲಂಕರಿಸಿದೆ. ಇದು ಕೇವಲ ಫ್ರಾಂಚೈಸಿ ಅಭಿಮಾನಿಗಳು ಮಾತ್ರವಲ್ಲದೇ ಇಡೀ ಕ್ರಿಕೆಟ್ ಬಳಗಕ್ಕೆ ಅಚ್ಚರಿ ತಂದಿದೆ.
ಐಪಿಎಲ್ ಮೊದಲಾರ್ಧದಲ್ಲಿ ರುತುರಾಜ್ ಗಾಯಕ್ವಾಡ್ ಕ್ಯಾಪ್ಟನ್ಸಿಯಲ್ಲಿ ಸರಣಿ ಸೋಲುಂಡ ಸಿಎಸ್ಕೆಗೆ ದ್ವಿತೀಯಾರ್ಧದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವವು ಗೆಲುವು ತಂದುಕೊಡಲಿಲ್ಲ. ಇದು ಹಲವರ ಆಶ್ಚರ್ಯಕ್ಕೆ ಕಾರಣವಾಯಿತು. ಧೋನಿ ಮುಂದಾಳತ್ವದಲ್ಲಿಯೂ ಸರಣಿ ಸೋಲಿಗೆ ಗುರಿಯಾಗಿರುವ ಸಿಎಸ್ಕೆ, ಕೊನೆ ಕ್ಷಣಗಳಲ್ಲಿ ಸಹ ಗೆಲುವನ್ನು ನೋಡಲು ಸಾಧ್ಯವಾಗದಿರುವುದು ದುರಾದೃಷ್ಟ. ಈ ಮಧ್ಯೆ ಸಿಎಸ್ಕೆ ನಾಯಕನ ಭವಿಷ್ಯ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಈ ಸೀಸನ್ ಮುಗಿದ ನಂತರ ಮತ್ತೊಂದು ಸೀಸನ್ನಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
"ಮುಂದಿನ ಐಪಿಎಲ್ ಆವೃತ್ತಿಗೆ ಧೋನಿ ಕಣಕ್ಕಿಳಿಯಲಿದ್ದಾರೆ. ತಾವು 18ನೇ ಓವರ್ನಲ್ಲಿ ಬ್ಯಾಟಿಂಗ್ ಬರುವಂತ ಒಂದೊಳ್ಳೆ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಬರುತ್ತಾರೆ. ಈ ಸೀಸನ್ನಲ್ಲಿ ಧೋನಿ ಬಹಳ ಬೇಗ ಕ್ರೀಸ್ಗೆ ಬಂದು ಬ್ಯಾಟ್ ಮಾಡಿದ್ದಾರೆ. 4-5 ಕ್ರಮಾಂಕಗಳಲ್ಲಿ ಹೆಚ್ಚಾಗಿ ಆಡಿದ್ದಾರೆ. ಇಲ್ಲಿ ಚೆನ್ನೈ ಪರ ಧೋನಿ ಆಟವನ್ನು ಅದಾಗಲೇ ಶುರು ಮಾಡಿದ್ದಾರೆ. ಆದರೆ, ಉಳಿದವರು ಇನ್ನೂ ಯೋಚಿಸುವುದರಲ್ಲೇ ಇದ್ದಾರೆ. ಹೊಸ ತಂಡವನ್ನು ಕಟ್ಟಲು ಸಿಎಸ್ಕೆ ಕೆಲವರನ್ನು ರಿಲೀಸ್ ಮಾಡುವುದೇ ಉತ್ತಮ" ಎಂದು ಆಕಾಶ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).