ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಎಸ್​ ಧೋನಿ! ಯಾವ ಪಕ್ಷದಿಂದ? MS Dhoni

MS Dhoni
Published on

MS Dhoni : ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಇರುವ ಕ್ರೇಜ್ ಬಗ್ಗೆ ವಿಶೇಷವಾಗಿ ಮಾತನಾಡುವ ಅಗತ್ಯವಿಲ್ಲ. ಏಕೆಂದರೆ, ಧೋನಿ ಏನು ಎಂಬುದು ಕ್ರೀಡಾಭಿಮಾನಿಗಳಿಗೆ ಮಾತ್ರವಲ್ಲ, ಎಲ್ಲರಿಗೂ ಗೊತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಸದ್ಯ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದರೂ, ಅವರ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಜಯಿಸಿದೆ. ಈ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಏಕೈಕ ನಾಯಕ ಧೋನಿ. ತನ್ನ ನಾಯಕತ್ವದಿಂದಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರಿ ಸದ್ದು ಮಾಡಿದ ಧೋನಿ, ಇದೀಗ ಅದೇ ನಾಯಕತ್ವದ ಖದರ್​ ತೋರಲು ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಸಿಸಿಐ ಉಪಾಧ್ಯಕ್ಷರಾಗಿರುವ ರಾಜೀವ್ ಶುಕ್ಲಾ ಅವರು ಇತ್ತೀಚೆಗೆ ಯೂಟ್ಯೂಬ್ ಚಾನೆಲ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಧೋನಿ ಓರ್ವ ಉತ್ತಮ ರಾಜಕಾರಣಿಯಾಗಬಲ್ಲರು ಎಂಬ ಹೇಳಿಕೆ ನೀಡಿದ್ದಾರೆ. ಹೀಗಾಗಿ ಧೋನಿ ಅವರ ರಾಜಕೀಯ ಪ್ರವೇಶದ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ಧೋನಿ ಅವರು ರಾಜಕಾರಣಿಯಾಗುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ಸೌರವ್ ಗಂಗೂಲಿ ಅವರು ಬಂಗಾಳ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂದು ನಾನು ಯಾವಾಗಲೋ ಭಾವಿಸಿದ್ದೆ. ಧೋನಿ ಏನಾದರೂ ರಾಜಕೀಯಕ್ಕೆ ಪ್ರವೇಶ ಮಾಡಿದರೆ, ಅಲ್ಲಿಯೂ ಒಳ್ಳೆಯ ಕೆಲಸಗಳನ್ನು ಮಾಡಲಿದ್ದಾರೆ. ಚುನಾವಣೆಗೆ ನಿಂತರೆ ಧೋನಿ ಅವರು ಸುಲಭವಾಗಿ ಗೆಲ್ಲುತ್ತಾರೆ. ಏಕೆಂದರೆ, ಅವರಿಗೆ ಅಷ್ಟೊಂದು ಜನಪ್ರಿಯತೆ ಇದೆ. ಆದರೆ, ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೋ ಇಲ್ಲವೋ ನನಗೆ ತಿಳಿದಿಲ್ಲ, ಅದು ಅವರ ಕೈಯಲ್ಲಿದೆ ಎಂದು ಶುಕ್ಲಾ ಹೇಳಿದರು.

ಹಿಂದೊಮ್ಮೆ ಧೋನಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿದಾಗ ಧೋನಿಯೊಂದಿಗೆ ನಡೆಸಿದ ಆಸಕ್ತಿದಾಯಕ ಸಂಭಾಷಣೆಯ ಬಗ್ಗೆಯೂ ಶುಕ್ಲಾ ಇದೇ ಸಂದರ್ಭದಲ್ಲಿ ಮಾತನಾಡಿದರು. ನೀವು ಲೋಕಸಭಾ ಚುನಾವಣೆಗೆ ಸ್ಫರ್ಧೆ ಮಾಡುತ್ತೀರಂತೆ ಎಂದು ಧೋನಿ ಅವರನ್ನು ಕೇಳಿದಾಗ, ಅವರು ಇಲ್ಲ, ಇಲ್ಲ ಎಂದರು. ಧೋನಿ ಅವರದ್ದು ರಾಜಕೀಯದಿಂದ ದೂರವಿರುವ ಸ್ವಭಾವ ಎಂದರು. ಅಲ್ಲದೆ, ಧೋನಿ ಅವರು ಮೊಬೈಲ್ ಫೋನ್ ಕೂಡ ಇಟ್ಟುಕೊಳ್ಳುವುದಿಲ್ಲ. ಅವರ ಬಳಿ ಮೊಬೈಲ್ ಇಲ್ಲದ ಕಾರಣ ಬಿಸಿಸಿಐ ಆಯ್ಕೆದಾರರು ಕೂಡ ಅವರನ್ನು ಸಂಪರ್ಕಿಸುವುದು ಕಷ್ಟಕರವಾಗಿತ್ತು. ಹೀಗಿರುವಾಗ ರಾಜಕಾರಣಿಗಳ ಕೈಗೆ ಧೋನಿ ಸಿಗುವುದಿಲ್ಲ ಎಂದು ಶುಕ್ಲಾ ಹೇಳಿದರು.

ಅಂದಹಾಗೆ ಐಪಿಎಲ್ 2025ಕ್ಕೂ ಮೊದಲು ಸಿಎಸ್‌ಕೆ ತಂಡ ಧೋನಿ ಅವರನ್ನು ಉಳಿಸಿಕೊಂಡಿದೆ. ಐಪಿಎಲ್​ಗೆ ಧೋನಿ ಇನ್ನೂ ನಿವೃತ್ತಿ ಘೋಷಿಸಿಲ್ಲ. ಆದ್ದರಿಂದ, ಧೋನಿ ರಾಜಕೀಯಕ್ಕೆ ಬರುವ ಕಲ್ಪನೆ ತುಂಬಾ ದೂರದಲ್ಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net