ಪ್ರತಾಪ್ ಸಿಂಹ ತಮ್ಮನ ವಿರುದ್ಧ ಗಂಭೀರ ಆರೋಪ ಮಾಡಿ ವಿಡಿಯೋ ಬಿಡುಗಡೆ ಮಾಡಿದ ಕಾಂಗ್ರೆಸ್

video
Published on

ಮೈಸೂರು: ಅಣ್ಣ ಪ್ರತಾಪ್ ಸಿಂಹ, ಸಂಸತ್ ದಾಳಿಕೋರರಿಗೆ ಪಾಸ್ ನೀಡುವ ಕೆಲಸದಲ್ಲಿದ್ದರೆ ತಮ್ಮ ವಿಕ್ರಮ್ ಸಿಂಹ ಸಿನಿಮೀಯ ಮಾದರಿಯಲ್ಲಿ ಮರಗಳ್ಳತನದಲ್ಲಿ ತೊಡಗಿದ್ದಾನೆ ಎಂದು ಕಾಂಗ್ರೆಸ್​​​ ಗಂಭೀರ ಆರೋಪ ಮಾಡಿ ಸೋಶಿಯಲ್​​​ ಮೀಡಿಯಾ ಪೇಜ್​​​​ನಲ್ಲಿ ವಿಡಿಯೋ ಪೋಸ್ಟ್ ಮಾಡಿದೆ.

ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಸೀಲ್ದಾರ್ ಮಮತಾ ಅವರ ಮೂಲಕ ಬೆಳಕಿಗೆ ಬಂದಿದೆ. ಇದರಲ್ಲಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಕೈಜೋಡಿಸಿದ್ದು ಈ ಬಗ್ಗೆ ಸಚಿವ ಈಶ್ವರ ಖಂಡ್ರೆ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅದೇಶಿಸಲಿದ್ದಾರೆ. ಜತೆಗೆ ನಿಮ್ಮ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರು ಕೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾಗಿರುವುದೇಕೆ? ಎಂದು ಕಾಂಗ್ರೆಸ್​​​ ಪ್ರಶ್ನಿಸಿದೆ.

ಸಂಸದ ಪ್ರತಾಪ್​ ಸಿಂಹ ಪ್ರತಿಕ್ರಿಯೆ

ನೂತನ ಸಂಸತ್​ ಭವನದಲ್ಲಿ ಉಂಟಾದ ಭದ್ರತಾ ಲೋಪ ಘಟನೆ ಸಂಬಂಧ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್​, ಇದನ್ನು ಬಿಟ್ಟು ಬೇರೆ ಬಿಟ್ಟು ಬೇರೆ ಏನಾದರೂ ಕೇಳಿ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಮಾತನಾಡಿದ ಸಂಸದ ಪ್ರತಾಪ್​ ಸಿಂಹ, ಆ ವಿಚಾರದಲ್ಲಿ ಯಾವುದೇ ವಿವರಣೆ ಕೊಡುವುದಿಲ್ಲ. ಆ ಪ್ರಶ್ನೆ ಬಿಟ್ಟು ಬೇರೆ ಏನಾದರೂ ಇದ್ದರೆ ಕೇಳಿ ಎಂದಿದ್ದಾರೆ.

ಪ್ರತಾಪ ಸಿಂಹ ದೇಶದ್ರೋಹಿಯೇ ಅಥವಾ ದೇಶಪ್ರೇಮಿಯೇ ಎನ್ನುವುದು ಬೆಟ್ಟದ ಚಾಮುಂಡಿ ತಾಯಿ ಹಾಗೂ ಕೊಡಗಿನ ಕಾವೇರಿ ತಾಯಿಗೆ ಗೊತ್ತು. ನನ್ನ ಲೇಖನಗಳನ್ನು ಓದಿದ ಓದುಗರಿಗೆ ಗೊತ್ತು. ಇದಕ್ಕೆಲ್ಲಾ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

ನಾನು ದೇಶಪ್ರೇಮಿಯೋ ಅಥವಾ ದೇಶದ್ರೋಹಿಯೋ ಎಂದು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಇಷ್ಟು ಮಾತ್ರವೇ ಹೇಳುತ್ತೇನೆ. ಆ ಬಗ್ಗೆ ಇನ್ನೇನೂ ಕೇಳಬೇಡಿ ಎಂದು ಭದ್ರತಾ ಲೋಪ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net