ರೈತರಿಗೆ ಕೂಡಲೇ ಭೂಮಿ ವಾಪಾಸು ನೀಡಿ

udp-2-kota srinivas poojary
Published on

ಉಡುಪಿ: ವಿಜಯಪುರದಲ್ಲಿ ಸಾವಿರಾರು ಎಕ್ರೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್​ ಎಂಬೂದಾಗಿ ನಮೂದಾಗಿದ್ದು, ಸಚಿವ ಜಮೀರ್​ ಅಹ್ಮದ್​ ಎಲ್ಲವೂ ವಕ್ಫ್​ ಆಸ್ತಿ ಎನ್ನುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಬೆಂಬಲ ಕೊಡುತ್ತಿದ್ದಾರೆ. ರೈತರು ಒಂದು ತುಂಡ ಭೂಮಿ ಕಳೆದುಕೊಳ್ಳಬಾರದು. ತತ್​ಕ್ಷಣವೇ ರೈತರಿಗೆ ಭೂಮಿ ಹಿಂದಿರುಗಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಆಗ್ರಹಿಸಿದರು.

ಮಂಗಳವಾರ, ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾದ ಅವರು, ವಿಜಯಪುರ ಜಿಲ್ಲೆಯ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ. 11,500 ಎಕ್ರೆ ರೈತರ ಭೂಮಿ ವಕ್ಫ್​ ಬೋರ್ಡ್​ ಸ್ವಾಧಿನ ಪಡಿಸಿಕೊಂಡಿದೆ. 1988 ರಿಂದ 2018ರ ವರೆಗೂ ಪಹಣಿಯಲ್ಲಿ ರೈತರ ಹೆಸರು ಇತ್ತು. ಇದೀಗ ಪಹಣಿ ವಕ್ಫ್​ ಬೋರ್ಡ್​ ಪಾಲಾಗಿದೆ. ಒಮ್ಮೆ ವಕ್ಫ್​ ಬೋರ್ಡ್​ ಇದು ನಮ್ಮ ಆಸ್ತಿ ಎಂದು ಗೊತ್ತುಪಡಿಸಿದರೆ ಜಿಲ್ಲಾಧಿಕಾರಿ, ತಹಶೀಲ್ದಾರ್​ ಮೂಲಕ ಆ ಆಸ್ತಿಯನ್ನು ವಕ್ಫ್​ ಬೋರ್ಡ್​ಗೆ ನೀಡಬಹುದು. ಒಮ್ಮೆ ವಕ್ಫ್​ ಬೋರ್ಡ್​ಗೆ ಆಸ್ತಿ ನೀಡಿದ ಅನಂತರ ಅದನ್ನು ವಾಪಸ್​ ನೀಡುವುದಿಲ್ಲ. ಒಂದು ಸಮುದಾಯವನ್ನು ಓಲೈಸಲು ಕಾಂಗ್ರೆಸ್​ ಇಂಥ ಕಾನೂನು ರೂಪಿಸಿದೆ. ಅನಿಯಂತ್ರಿತ ಕಾನೂನು ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ರೇಶನ್​ ಕಾರ್ಡ್​ ಪರಿಶೀಲನೆ ಕೈಬಿಡಿ

ಗ್ಯಾರಂಟಿ ಫಲಾನುಭವಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಬಿಪಿಎಲ್​ ಕಾರ್ಡ್​ ಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಬಿಪಿಎಲ್​ ಕಾರ್ಡ್​ ರದ್ದತಿಯಿಂದ ಕೇಂದ್ರ ಸರ್ಕಾರದ ಅಕ್ಕಿ, ಆಯುಷ್ಮಾನ್​ ಯೋಜನೆಯ ಫಲ ಅನೇಕರಿಗೆ ಸಿಗುವುದಿಲ್ಲ. ಸರ್ಕಾರ ಈ ಯೋಚನೆ ಕೈಬಿಡದಿದ್ದರೆ ಬಿಜೆಪಿ ಜಿಲ್ಲಾಧಿಕಾರಿ ಕಚೇರಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ಬಿ.ಕೆ. ಹರಿಪ್ರಸಾದ್​ ಕ್ಷಮೆ ಯಾಚಿಸಲಿ

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತಿರ್ಥರ ಬಗ್ಗೆ ಕಾಂಗ್ರೆಸ್​ ಮುಖಂಡ ಬಿ.ಕೆ.ಹರಿಪ್ರಸಾದ್​ ನೀಡಿರುವ ಹೇಳಿಕೆ ಖಂಡನೀಯ. ಶ್ರೀಗಳ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದು, ಹಿಂದೂ ಸಮಾಜಕ್ಕೆ ನೋವು ತಂದಿದೆ. ತತ್​ಕ್ಷಣವೇ ಬಿ.ಕೆ. ಹರಿಪ್ರಸಾದ್​ ಕ್ಷಮೆ ಕೇಳಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net