

ನವದೆಹಲಿ: ಮಧ್ಯಪ್ರದೇಶದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಲುಗಾಡುತ್ತಿದ್ದು ಉರುಳುವ ಭೀತಿಯಲ್ಲಿದೆ. ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗರಾದ 5 ಸಚಿವರು ಸೇರಿ 17 ಕಾಂಗ್ರೆಸ್ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.
ಒಂದು ಕಾಲದಲ್ಲಿ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಪ್ರಸ್ತುತ ದೆಹಲಿಯಲ್ಲಿದ್ದು, ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ರೆಬೆಲ್ ಶಾಸಕರ ಜತೆ ಕಾಂಗ್ರೆಸ್ ರಾಜಿ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ. ಆದರೆ ಈಗ ಸಂಧಾನ ಸಫಲವಾಗುವುದು ಅಸಾಧ್ಯ ಎನ್ನುವುದು ಮಧ್ಯಪ್ರದೇಶದ ರಾಜಕೀಯ ಲೆಕ್ಕಾಚಾರವಾಗಿದೆ.
ಸಿಂಧಿಯಾ ಅವರು 2018ರ ಡಿಸೆಂಬರ್ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಮುಖ್ಯಮಂತ್ರಿಯಾಗಿ ಕಮಲ್ ನಾಥ್ ಅಧಿಕಾರ ಸ್ವೀಕರಿಸಿದ್ದರು. ಕಾಂಗ್ರೆಸ್ಸಿನ ಗೆಲುವಿಗೆ ಸಾಕಷ್ಟು ಕೊಡುಗೆ ನೀಡಿದ್ದ ಸಿಂಧಿಯಾ ಅವರಿಗೆ ಕೇವಲ 23 ಶಾಸಕರ ಬೆಂಬಲ ಪಡೆಯಲು ಸಾಧ್ಯವಾಗಿತ್ತು.
ಕಳೆದ ವರ್ಷದ ನಡೆದ ಲೋಕಸಭಾ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ಸಿಂಧಿಯಾ ಅವರನ್ನು ನೇಮಕಗೊಳಿಸಿ ಸಮಾಧಾನ ಮಾಡಲಾಗಿತ್ತು. ಈಗ ಮತ್ತಷ್ಟು ಶಾಸಕ ಬೆಂಬಲ ಪಡೆದಿರುವ ಸಿಂಧಿಯಾ ಅವರು ಮತ್ತೆ ರೆಬೆಲ್ ಆಗಿದ್ದಾರೆ. ಅವರಿಗೆ ಬೆಂಬಲ ನೀಡಿರುವ ಶಾಸಕರು ಬೆಂಗಳೂರಿಗೆ ಆಗಮಿಸಿದ್ದು ಮಧ್ಯಪ್ರದೇಶದ ಕಾಂಗ್ರೆಸ್ ಜತೆ ಸಂಪರ್ಕ ಕಡಿದುಕೊಂಡಿದ್ದಾರೆ.
ಬಿಜೆಪಿ ಆಡಳಿತವಿರುವ ಕರ್ನಾಟಕ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಶಾಸಕರು ಮತ್ತು ದೆಹಲಿಯಲ್ಲಿ ಇಂದು ರಾತ್ರಿ ಮಾಜಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭೇಟಿ ಮಾಡಲಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. (ಏಜೆನ್ಸೀಸ್)