ಸಂಸದ ಕ್ಯಾ.ಬ್ರಿಜೇಶ್ ಚೌಟರಿಗೆ ಸ್ವಕ್ಷೇತ್ರದಲ್ಲಿ ಭರ್ಜರಿ ಸ್ವಾಗತ

chauta
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕ್ಯಾ.ಬ್ರಿಜೇಶ್ ಚೌಟ ಅವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತಿಸಿದರು.
Published on

ಮಂಗಳೂರು: ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನವದೆಹಲಿಯಿಂದ ಶನಿವಾರ ಸಂಜೆ ಸ್ವಕ್ಷೇತ್ರಕ್ಕೆ ಮರಳಿದ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕ್ಯಾ.ಬ್ರಿಜೇಶ್ ಚೌಟ ಅವರನ್ನು ಶಾಲು ಹೊದೆಸಿ ಸ್ವಾಗತಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಆರತಿ ಬೆಳಗಿ ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಹೊರಟ ಸಂಸದರನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇರುವ ವಾಹನಗಳ ಸಾಲು ಹಿಂಬಾಲಿಸಿತು.
ಕಾವೂರು ಬಿಜೆಪಿ ಕಚೇರಿ ಬಳಿ ಹಾಗೂ ಕೆಪಿಟಿ ವೃತ್ತದ ಸಮೀಪ ಸಂಸದರನ್ನು ಪಕ್ಷದ ಕಾರ್ಯಕರ್ತರು ವೈವಿಧ್ಯಮಯ ಹೂಮಾಲೆ ಹಾಕಿ, ಶಾಲು ಹಾಕಿ, ಆರತಿ ಬೆಳಗಿ ಮತ್ತೆ ಸ್ವಾಗತಿಸಿದರು. ಚುನಾವಣೆ ಸಂದರ್ಭ ಕ್ಯಾ.ಚೌಟ ಅವರಿಗೆಂದೇ ಸಿದ್ಧಪಡಿಸಲಾದ ಹಾಡುಗಳಿಗೆ ಕಾರ್ಯಕರ್ತರು ಹೆಜ್ಜೆ ಹಾಕುವುದು ಕಂಡುಬಂತು.
ವಿಜಯೋತ್ಸವ ಮೆರವಣಿಗೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಹರೀಶ್ ಪೂಂಜಾ ಜತೆಯಾದರು. ಮೆರವಣಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದ ನಗರದ ಟಿಎಂಎ ಪೈ ಸಭಾಂಗಣ ತನಕ ಸಾಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net