

ದೇವದುರ್ಗ: ತಾಯ್ತನ ಎನ್ನುವುದು ದೇವರ ಕೊಟ್ಟ ವರವಾಗಿದ್ದು, ಮಹಿಳೆಯರು ಜೀವ ಪಣಕ್ಕಿಟ್ಟು ಕಾಪಾಡಿಕೊಳ್ಳುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಶರಣಮ್ಮ ಹೇಳಿದರು.
ಪಟ್ಟಣದ ಅಬ್ಬುಮೊಹಲ್ಲಾ ಏರಿಯಾ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಯ್ತನ ಎನ್ನುವುದು ತ್ಯಾಗದ ಸಂಕೇತವಾಗಿದೆ. ಹುಟ್ಟಿನಿಂದ ಸಾವಿನವರೆಗೆ ಕುಟುಂಬಸ್ಥರಿಗೆ ಆಶ್ರಯ ನೀಡಲು ಬಯಸುವ ಏಕೈಕ ಜೀವ ಹೆಣ್ಣುಮಗು. ನಿತ್ಯ ಒತ್ತಡದ ಜೀವನದಲ್ಲಿ ವೈಯಕ್ತಿಕ ಆಸೆ ಆಕಾಂಕ್ಷೆ ಬದಿಗಿಟ್ಟು ಮಾತೃಹೃದಯವನ್ನು ಹೊಂದಿರುತ್ತಾರೆ. ಸಮಾಜ ಹೆಣ್ಣು ಮಕ್ಕಳನ್ನು ಗೌರವಿಸಿ ಸಮಾನವಾದ ಸ್ಥಾನಮಾನ ನೀಡಬೇಕಿದೆ ಎಂದರು.
ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ರಾಠೋಡ್ ಮಾತನಾಡಿ, ಪ್ರತಿ ಕುಟುಂಬ, ಹಳ್ಳಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಮೂಲ್ಯವಾಗಿದೆ. ಪಾಲಕರು ಹೆಣ್ಣು-ಗಂಡು ಎಂಬ ಭೇದಭಾವ ಮಾಡದೆ ಸಮಾನತೆಯಿಂದ ಕಾಣಬೇಕು. ಸಮಾನತೆ ಮನೆಯಿಂದಲೇ ಆರಂಭವಾಗಬೇಕು ಎಂದರು. ಸಿಡಿಪಿಒ ಮಾಧವಾನಂದ, ಮೇಲ್ವಿಚಾರಕಿ ಕಮಲಾಕ್ಷಿ, ಮುಖ್ಯಶಿಕ್ಷಕಿ ಪವಿತ್ರಾ ಯಾಟಗಲ್, ಅಂಗನವಾಡಿ ಕಾರ್ಯಕರ್ತೆಯರಾದ ಶಾಂತಮ್ಮ, ಸುಜಾತಾ ನಾಯಕ, ಅನಸೂಯ, ಗುರುಲಿಂಗಮ್ಮ, ಶಂಶದ್ ಬೇಗಂ ಇದ್ದರು.