

ನವದೆಹಲಿ: ಮದರ್ ಸೆಂಟಿಮೆಂಟ್ ಎನ್ನುವುದು ಭಾರಿ ಪರಿಣಾಮ ಬೀರುವಂಥದ್ದು. ಅದೇ ಕಾರಣಕ್ಕೆ ಹಲವಾರು ಸಿನಿಮಾಗಳಲ್ಲಿ ಮದರ್ ಸೆಂಟಿಮೆಂಟ್ ಇದ್ದೇ ಇರುತ್ತದೆ. ನಿಜ ಜೀವನದಲ್ಲಿ ತಾಯಿಯ ಪ್ರೀತಿಯಿಂದಲೇ ಗೆದ್ದವರಿದ್ದರೆ, ಮದರ್ ಸೆಂಟಿಮೆಂಟ್ನಿಂದಲೇ ಗೆದ್ದ ಸಿನಿಮಾಗಳೂ ಬಹಳಷ್ಟಿವೆ. ಕನ್ನಡದ ಕೆಜಿಎಫ್, ಜೋಗಿ, ಅಣ್ಣಯ್ಯ.. ಹೀಗೆ ಹಲವು ಸಿನಿಮಾಗಳು ಅಂಥ ಪಟ್ಟಿಯಲ್ಲಿವೆ.
ಇನ್ನು ದೊಡ್ಡ ದೊಡ್ಡ ನಾಯಕರೆಲ್ಲ ಆಗಾಗ ತಮ್ಮ ಮಾತೃಪ್ರೇಮವನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸಿದ್ದಕ್ಕೂ ಹಲವು ಉದಾಹರಣೆಗಳಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಇದಕ್ಕೆ ಹೊರತಲ್ಲ. ಅವರು ಕೂಡ ಆಗಾಗ ಗುಜರಾತ್ಗೆ ತೆರಳಿ ಅಮ್ಮನನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡು ಬರುತ್ತಿರುತ್ತಾರೆ. ಆ ಕುರಿತ ಫೋಟೋಗಳೂ ಅವರ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗುತ್ತಿರುತ್ತವೆ. ಇದಕ್ಕೆ ಬಿಜೆಪಿಯ ಬೆಂಬಲಿಗರಿಂದಷ್ಟೇ ಅಲ್ಲದೆ ಇತರ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಮೆಚ್ಚುಗೆಗಳು ವ್ಯಕ್ತವಾಗುತ್ತಿರುತ್ತವೆ.
ಇದೀಗ ರಾಹುಲ್ ಗಾಂಧಿ ಕೂಡ ತಮ್ಮ ಮದರ್ ಸೆಂಟಿಮೆಂಟ್ ವ್ಯಕ್ತಪಡಿಸಿದ್ದಾರೆ. ಅಮ್ಮನನ್ನು ಅಪ್ಪಿಕೊಂಡ ಫೋಟೋವೊಂದನ್ನು ಅವರು ಟ್ವೀಟ್ ಮಾಡಿದ್ದು, ಅದಕ್ಕೊಂದು ಕ್ಯಾಪ್ಷನ್ ಕೂಡ ಹಾಕಿಕೊಂಡಿದ್ದಾರೆ. ‘ಅಮ್ಮನಿಂದ ಸಿಕ್ಕಿದ್ದು ಈ ಪ್ರೀತಿ, ಅದನ್ನೇ ನಾನು ದೇಶದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ' ಎಂದು ಫೋಟೋ ಜತೆ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ.
ಸದ್ಯ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿಯನ್ನು ಅನುಸರಿಸುತ್ತಿದ್ದಾರಾ ಎನ್ನುವಂಥ ಲಕ್ಷಣಗಳು ಗೋಚರಿಸುತ್ತಿವೆ. ಮೋದಿಯಂತೆಯೇ ಕುರುಚಲು ಗಡ್ಡ ಬಿಟ್ಟಿರುವ ರಾಹುಲ್, ಪ್ರಧಾನಿ ಮೋದಿಯಂತೆ ಮಾತೃಪ್ರೇಮವನ್ನು ಅಮ್ಮ ಸೋನಿಯಾ ಜತೆಗಿನ ಫೋಟೋ ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ವಿಶೇಷವೆಂದರೆ ಮಧ್ಯಾಹ್ನವಷ್ಟೇ ಹಂಚಿಕೊಳ್ಳಲಾಗಿರುವ ಈ ಫೋಟೋಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. 94 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 14 ಸಾವಿರಕ್ಕೂ ಅಧಿಕ ಮಂದಿ ರಿಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ 16 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ.