

ಪಾಟ್ನಾ: ದುಷ್ಕರ್ಮಿಗಳಿಂದ ಥಳಿತಕ್ಕೊಳಗಾಗಿ ಮೃತಪಟ್ಟ ಪೊಲೀಸ್ ಆಫೀಸರ್ ಅಶ್ವಿನ್ ಕುಮಾರ್ ತಾಯಿ ಕೂಡ ಮಗನ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ಭಾನುವಾರ ನಡೆದಿದೆ.
ದರೋಡೆ ಪ್ರಕರಣ ಬೇದಿಸಲು ಬಿಹಾರದ ಕೃಷ್ಣಾಗಂಜ್ ಜಿಲ್ಲೆಯ ಪೊಲೀಸ್ ಇನ್ಸಪೆಕ್ಟರ್ ಅಶ್ಚಿನ್ ಕುಮಾರ್ (40) ಅವರು ಪಕ್ಕದ ಪಶ್ಚಿಮ ಬಂಗಾಳದಲ್ಲಿರುವ ಉತ್ತರ ದಿನಜಪುರ್ ಜಿಲ್ಲೆಯ ಪಂತಪಡಾ ಎಂಬ ಹಳ್ಳಿಗೆ ಶುಕ್ರವಾರ ರಾತ್ರಿ ಹೋಗಿದ್ದರು. ಈ ವೇಳೆ ಅಶ್ವಿನ್ ಕುಮಾರ್ ಅವರಿಗೆ ಅಲ್ಲಿನ ಸ್ಥಳೀಯ ಪೊಲೀಸರು ಸಹಕಾರ ಕೊಟ್ಟಿದ್ದಿಲ್ಲ ಎಂದು ಆರೋಪಿಸಲಾಗಿದೆ.
ಕಳ್ಳರನ್ನು ಬೆನ್ನಟ್ಟಿ ಹಿಡಿಯುವಾಗ ಇನ್ಸಪೆಕ್ಟರ್ ಅಶ್ವಿನ್ ಕುಮಾರ್ ಅವರನ್ನು ಸುತ್ತುವರೆದ ದುಷ್ಕರ್ಮಿಗಳು ಮಾರಣಾಂತಿಕವಾಗಿ ಥಳಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಅಶ್ವಿನ್ ಅವರ ತಾಯಿ ರುಕ್ಮಿಣಿಬಾಯಿ (65) ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಅಶ್ಚಿನ್ ಅವರ ಸಾವಿಗೆ ಕಾರಣರಾದ ಮೂವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಬಿಹಾರದಲ್ಲಿ ತಲ್ಲಣ ಸೃಷ್ಟಿಸಿದೆ.