

ಮಂಗಳೂರು: ತಾಯಿಯೊಬ್ಬಳು ಜೀವನದಲ್ಲಿ ಎಲ್ಲರ ಸ್ಥಾನವನ್ನು ತುಂಬುತ್ತಾಳೆ, ಆದರೆ ತಾಯಿಯ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ತಾಯಿಯನ್ನು ಸಂಸ್ಕೃತಿಯ ಮೂಲ ಎನ್ನಬಹುದು ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು.
ಬಹು ಓದು ಬಳಗ ಮಂಗಳೂರು ಹಾಗೂ ಆಕೃತಿ ಆಶಯ ಪಬ್ಲಿಕೇಷನ್ಸ್ ಮಂಗಳೂರು ಸಹಯೋಗದೊಂದಿಗೆ ಮಕ್ಕಳ ಏಳ್ಗೆಗಾಗಿ ಜೀವ ತೇದವರ ಕಥನಗಳು ‘ತಾಯಿ ಬೇರು’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ನೆಲದ ತಾಯಂದಿರು ಸ್ವಾಭಿಮಾನದ ಬದುಕು ನಡೆಸಿದ್ದಾರೆ. ಸಾಮಾಜಿಕವಾಗಿ ಎದುರಾದ ವಿವಿಧ ಸಮಸ್ಯೆ ಸವಾಲುಗಳನ್ನು ಅಂದು ದಿಟ್ಟವಾಗಿ ಎದುರಿಸಿ ಮುನ್ನಡೆದಿದ್ದಾರೆ. ಒಬ್ಬೊಬ್ಬರ ಕಥಾನಕಗಳು ಒಂದೊಂದು ತೆರನಾಗಿತ್ತು. ನೋವಿನ ಸಂಗತಿಗಳು ಹಲವು ವಿಧದಲ್ಲಿತ್ತು. ಅಂದು ಸಮಾನ ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆ ಸರಿಯಾಗಿ ಸಿಗುತ್ತಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ. ಇದನ್ನು ಮಾಡಬೇಕಾದ್ದು ಅಂದು ಯಾರು ಎಂಬ ಪ್ರಶ್ನೆಯ ಜತೆಗೆ ಮುಂದೆಯೂ ಈ ಸಮಸ್ಯೆ ಮುಗಿಯುವುದಿಲ್ಲ ಎಂಬುದು ವಾಸ್ತವ. ನಮ್ಮ ಸಮಾಜ 50 ವರ್ಷ ಹೇಗಿತ್ತೋ ಈಗಲೂ ಅದೇ ರೀತಿ ಇದೆ. ನಾವಿದನ್ನು ಸರಿಪಡಿಸದಿದ್ದರೆ ಮುಂದಿನ 50 ವರ್ಷವೂ ಹೀಗೆಯೇ ಕಳೆಯಬೇಕಾಗುತ್ತದೆ ಎಂದರು.
ಪುಸ್ತಕ ಬಿಡುಗಡೆ ಮಾಡಿದ ಸಮಾಜಶಾಸಜ್ಞ ಡಾ.ಲಕ್ಷ್ಮೀಪತಿ ಮಾತನಾಡಿ, ಭಾರತದಲ್ಲಿ ಯಾರೂ ಕಂಡು ಕೇಳರಿಯದ ಚರಿತ್ರೆಯನ್ನು ಬರೆಯುವ ಕ್ರಮ ಈಗಿನ ಸಮಾಜದಲ್ಲಿ ಜಾಗೃತವಾಗಿದ್ದು ಅಭಿನಂದನೀಯ. ಇದು ತಳ ಸಮುದಾಯಕ್ಕೆ ಬೆಳಕು. ನಮ್ಮೊಳಗೆ ಬದಲಾವಣೆಯಾಗದಿದ್ದರೆ ಸಮಾಜದಲ್ಲಿ ಪರಿವರ್ತನೆ ಅಸಾಧ್ಯ ಎಂದರು.
ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಸುಧಾರಾಣಿ ಅವರು ಪುಸ್ತಕ ವಿಮರ್ಶೆ ನಡೆಸಿದರು. ಸಮಾಜಸೇವಕರಾದ ಮಲ್ಪೆ ಶಾರದಕ್ಕ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಆಕೃತಿ ಆಶಯ ಪಬ್ಲಿಕೇಶನ್ಸ್‌ನ ಪ್ರಕಾಶಕರಾದ ಕಲ್ಲೂರು ನಾಗೇಶ್ ಸ್ವಾಗತಿಸಿದರು. ಪ್ರಧಾನ ಸಂಪಾದಕ ಡಾ.ಪ್ರಕಾಶ್ ಪಿಂಟೊ ಪ್ರಸ್ತಾವಿಸಿದರು. ಸಂಪಾದಕ ಡಾ.ಶ್ರೀನಿವಾಸ್ ಹೊಡೆಯಾಲ ವಂದಿಸಿದರು. ಡಾ. ಉಷಾ ಪ್ರಕಾಶ್ ನಿರೂಪಿಸಿದರು.
-------------
ಎಲ್‌ಕೆಜಿ ಸೇರಲು ಬಡವರ್ಗದ ಜನರಲ್ಲೀಗ ಲಕ್ಷಾಂತರ ರೂ. ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಆರೋಗ್ಯಕ್ಕಾಗಿ ಸಾಲ ಮಾಡಿ ಸಂಕಷ್ಟ ಪಡುವ ಸ್ಥಿತಿ ಈಗಲೂ ಇದೆ. ಈನಿಟ್ಟಿನಲ್ಲಿ ಎಲ್ಲರಿಗೂ ಉಚಿತ-ಸಮಾನ ಶಿಕ್ಷಣ ಹಾಗೂ ಉಚಿತ ಆರೋಗ್ಯ ವ್ಯವಸ್ಥೆ ದೊರೆಯುವಂತಾದರೆ ಜನಸಾಮಾನ್ಯರ ಎಲ್ಲಾ ಕಷ್ಟ-ಸಮಸ್ಯೆಗಳಿಗೆ ಪರಿಹಾರ ದೊರೆಯುವಂತಾಗುತ್ತದೆ
-ತಾರಾನಾಥ ಗಟ್ಟಿ ಕಾಪಿಕಾಡ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ