ಕೊಲೆಗಾರ ಮಗನನ್ನು ಜೈಲಿನಿಂದ ಕರೆತರಲು 35 ಅಡಿ ಸುರಂಗ ಕೊರೆದ ಮಹಿಳೆಗೆ ಕಾದಿತ್ತು ಶಾಕ್​​!

Woman
Published on

ಕೈವ್: ತಾಯಿಯಾದವಳು ಮಗನಿಗಾಗಿ ಏನು ಬೇಕಾದರೂ ಮಾಡುತ್ತಾಳೆ ಎಂಬುದಕ್ಕೆ ಈ ಒಂದು ಘಟನೆ ಉದಾಹರಣೆಯಾಗಿದೆ. ಕೊಲೆಗಾರ ಮಗನನ್ನು ಜೈಲಿನಿಂದ ಬಿಡುಗಡೆ ಮಾಡಲು ತಾಯಿ ಮಾಡಿದ ಸಾಹಸ ಕಾರ್ಯ ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ.

ಈ ಘಟನೆ ಉಕ್ರೇನ್​ನ ದಕ್ಷಿನ ಜಪೋರಿಝಿಯಾದಲ್ಲಿ ನಡೆದಿದೆ. 51 ವರ್ಷದ ಮಹಿಳೆಯೊಬ್ಬಳು ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೊಲೆಗಾರ ಮಗನನ್ನು ಜೈಲಿನಿಂದ ಹೊರ ಕರೆತರಲು ಉಪಾಯ ಮಾಡಿ, ಜೈಲಿನ ಪಕ್ಕದಲ್ಲೇ ಬಾಡಿಗೆ ಮನೆಯಲ್ಲಿ ನೆಲೆಸುತ್ತಾಳೆ.

ಇದಾದ ಬಳಿಕ ತನ್ನ ಕಾರ್ಯವನ್ನು ಆರಂಭಿಸಿ, ಸಲಿಕೆ ಹಾಗೂ ಪಿಕಾಸಿ ತೆಗೆದುಕೊಂಡು ಜೈಲಿಗೆ ಸುರಂಗ ಮಾರ್ಗ ಮಾಡಲು ಪ್ರಾರಂಭಿಸುತ್ತಾಳೆ. ಆರಂಭದಲ್ಲಿ ನೆಲದಿಂದ ಹತ್ತು ಅಡಿ ಹಳ್ಳವನ್ನು ತೋಡುತ್ತಾಳೆ. ಬಳಿಕ ಅಲ್ಲಿಂದ ಜೈಲಿನೊಳಗೆ ಸುಮಾರು 35 ಅಡಿ ಸುರಂಗವನ್ನು ಕೊರೆಯುತ್ತಾಳೆ. ಯಾರು ಗಮನಕ್ಕೂ ಬಾರದಿರಲಿ ಎಂದು ಕೇವಲ ರಾತ್ರಿವೇಳೆಯೇ ತನ್ನ ಕೆಲಸದಲ್ಲಿ ನಿರತಳಾಗುವ ಮಹಿಳೆ, ರಾತ್ರಿ ಸುರಂಗ ಮಾರ್ಗದ ಬಳಿ ಬರುವಾಗ ಯಾರಿಗೂ ತಿಳಿಯದಿರಲಿ ಎಂದು ಸದ್ದು ಮಾಡದ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಬಳಸುತ್ತಾಳೆ.

ಸುರಂಗ ಮಾಡುವಾಗ ಮಣ್ಣನ್ನು ಹೊರಗಾಕಲು ಪ್ಲೇವುಡ್​ ಹಾಗೂ ಸಣ್ಣ ಚಕ್ರಗಳಿಂದ ಮಾಡಿದ ಟ್ರಾಲಿ ಬಳಸಿಕೊಂಡು ಮಣ್ಣು ಹೊರಗಾಕುತ್ತಿದ್ದಳು ಎಂದು ಜೈಲಿನ ಗಾರ್ಡ್​ ಹೇಳಿಕೊಂಡಿದ್ದಾರೆ. ಅಗೆಯುವ ಸ್ಥಳದ ಬಳಿ ಇದ್ದ ಬಳಕೆಯಲ್ಲಿಲ್ಲದ ಗ್ಯಾರೇಜ್​ ಬಳಿ ಮಣ್ಣನ್ನು ಸುರಿಯುತ್ತಿದ್ದಳು. ತನ್ನ ಕಾರ್ಯ ಪ್ರಾರಂಭಿಸಿದ ಮೂರು ವಾರಗಳ ಬಳಿಕ ಮಹಿಳೆ ಜೈಲು ಅಧಿಕಾರಿಗಳಿಗೆ ಸಿಕ್ಕಿಬೀಳುತ್ತಾಳೆ. ಅಷ್ಟರಲ್ಲಾಗಲೇ ಆಕೆ 3 ಟನ್​ ಮಣ್ಣನ್ನು ಅಗೆದಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರಿಗೂ ತನ್ನ ಗಮನ ಸೆಳೆಯಬಾರದೆಂದು ಹಗಲಿನ ವೇಳೆಯಲ್ಲಿ ಮಹಿಳೆ ಮನೆಯಿಂದ ಹೊರಗಡೆ ಬರುತ್ತಿರಲಿಲ್ಲ. ಸಾಕಷ್ಟು ಪ್ರಯತ್ನ ಮಾಡಿದ್ದ ಮಹಿಳೆ ಇದೀಗ ಸಿಕ್ಕಿಬಿದ್ದಿದ್ದಾಳೆ. ಆಕೆಯ ಮನೆಯ ಮೇಲೆ ದಾಳಿ ಮಾಡಿದಾಗ ಸುರಂಗ ತೋಡಲು ಬಳಸುತ್ತಿದ್ದ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಿಳೆಯನ್ನು ಜೈಲಿಗೆ ದೂಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net