

ಚಿತ್ರದುರ್ಗ: ಗಂಡನ ಅನುಮಾನ ರೋಗಕ್ಕೆ ಬೇಸತ್ತು ಗೃಹಿಣಿ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಚೆಕ್ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಹೊಸದುರ್ಗ ತಾಲೂಕಿನ ಮಳಲಿ ಗ್ರಾಮದ ಬಳಿ ಭಾನುವಾರ ಸಂಜೆ ತಾಯಿ ಮಕ್ಕಳು ನೀರಿಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಜಾನಕಲ್ ಲಂಬಾಣಿ ಹಟ್ಟಿಯ ಎಂಬುವರ ಪತ್ನಿ ಅರ್ಪಿತಾ(28), ಮಗಳು ಮಾನಸ(6), ಮಗ ಮದನ್(4) ಮೃತ ದುರ್ದೈವಿಗಳು. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿರುವ ಅರ್ಪಿತಾ, ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅರ್ಪಿತಾ ವಿಡಿಯೋ ಮಾಡುತ್ತಾ ಕಣ್ಣೀರಿಡುವಾಗ ಹಿಂಬದಿಯಲ್ಲಿ ನಿಂತು ಮಗ ಕೂಡ ಅಪ್ಪಾ.. ಎಂದು ಕೂಗಿದ್ದಾನೆ. ಈ ದೃಶ್ಯ ನೋಡಿದ್ರೆ ಮನಕಲಕುತ್ತೆ. ತಾಯಿ ಮತ್ತು ಮಕ್ಕಳ ಚಪ್ಪಲಿಗಳು ಚೆಕ್ ಡ್ಯಾಂ ಬದಿಯಲ್ಲೇ ಇವೆ.
8 ವರ್ಷದ ಹಿಂದೆ ಮದುವೆ ಹೊಸದುರ್ಗ ತಾಲೂಕಿನ ಜಾನಕಲ್ ಲಂಬಾಣಿಹಟ್ಟಿಯ ಅರ್ಪಿತಾ ಮತ್ತು ಕೊಂಡಜ್ಜಿ ಲಂಬಾಣಿಹಟ್ಟಿಯ ಮಂಜಾನಾಯ್ಕ್ ಮದುವೆ ಆಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಕುಡಿತದ ಚಟ ಅಂಟಿಸಿಕೊಂಡಿದ್ದ ಮಂಜಾನಾಯ್ಕ್, ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ. ಗಲಾಟೆ ಮಾಡಿ ಹಲ್ಲೆ ಮಾಡುತ್ತಿದ್ದನಂತೆ. ಮನನೊಂದ ಅರ್ಪಿತಾ, ತನ್ನಿಬ್ಬರು ಮಕ್ಕಳನ್ನೂ ಕರೆದೊಯ್ದು ಚೆಕ್ಡ್ಯಾಂಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಮೃತದೇಹಗಳನ್ನು ಹೊರಕ್ಕೆ ತೆಗೆದು ಶವಾಗಾರಕ್ಕೆ ರವಾನಿಸಲಾಗಿದೆ. ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.