'ನನ್ನೊಂದಿಗೆ ಎಲ್ಲರೂ ಸಂಪರ್ಕ ಕಳೆದುಕೊಂಡರು, ಯಾರೂ ಮಾತಾಡಲಿಲ್ಲ': ಕ್ರಿಕೆಟರ್​ ಶ್ರೀಶಾಂತ್​ ನೋವು...

Shreeshatn 11 may 20
Published on

ಮುಂಬೈ: ಭಾರತ ಕ್ರಿಕೆಟ್​ ತಂಡದ ಮಾಜಿ ಫಾಸ್ಟ್​ ಬೌಲರ್​ ಶ್ರೀಶಾಂತ್ ಕ್ರಿಕೆಟ್ ಭವಿಷ್ಯ ಅರ್ಧಕ್ಕೆ ತುಂಡಾಗಲು ಕಾರಣ ಸ್ಫಾಟ್​ ಫಿಕ್ಸಿಂಗ್​ ಎಂಬ ಹಗರಣ.

2013ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ನಡೆದ ಸ್ಪಾಟ್​ ಫಿಕ್ಸಿಂಗ್​ ಹಗರಣದಲ್ಲಿ ಶ್ರೀಶಾಂತ್​ ಅವರ ಹೆಸರು ಕೇಳಿಬಂದಿತ್ತು. ಅದರ ಬೆನ್ನಲ್ಲೇ ಅವರಿಗೆ ಬಿಸಿಸಿಐನಿಂದ ಆಜೀವ ನಿಷೇಧ ಹೇರಲಾಗಿತ್ತು. ಈ ಪ್ರಕರಣ ಸುಪ್ರೀಂಕೋರ್ಟ್​ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟ್​​ನ ಸೂಚನೆಯಂತೆ ನಿಷೇಧವನ್ನು ಏಳುವರ್ಷಗಳಿಗೆ ಇಳಿಸಲಾಗಿತ್ತು. ಅದರ ಅನ್ವಯ ಕೇರಳದ ಕ್ರಿಕೆಟಿಗ ಶ್ರೀಶಾಂತ್​ ಅವರ ನಿಷೇಧ ಶಿಕ್ಷೆಯ ಅವಧಿ 2020ರ ಸೆಪ್ಟೆಂಬರ್​​ನಲ್ಲಿ ಮುಗಿಯಲಿದೆ.

ಹೀಗಿರುವಾಗ ಶ್ರೀಶಾಂತ್​ ಅವರು ಹಿಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನನ್ನ ಮೇಲೆ ಆರೋಪ ಬಂದ ದಿನಗಳು ಹೇಗಿತ್ತು ಎಂದು ತಿಳಿಸಿದ್ದಾರೆ.

ಸ್ಪಾಟ್​ ಫಿಕ್ಸಿಂಗ್​ನಲ್ಲಿ ನನ್ನ ಹೆಸರು ಕೇಳಿಬರುತ್ತಿದ್ದಂತೆ ಬಹುತೇಕ ಆಟಗಾರರು ನನ್ನನ್ನು ಅವಾಯ್ಡ್​ ಮಾಡಲು ಶುರುಮಾಡಿದರು. ಸರಿಯಾಗಿ ಮಾತನಾಡುತ್ತಿರಲಿಲ್ಲ. ವೀರೇಂದ್ರ ಸೆಹ್ವಾಗ್​, ವಿವಿಎಸ್​ ಲಕ್ಷ್ಮಣ್​ ಸೇರಿ ಮೂರ್ನಾಲ್ಕು ಜನ ಮಾತ್ರ ನನ್ನೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದರು. ಉಳಿದವರು ಯಾರೂ ನನ್ನ ಹತ್ತಿರ ಸೇರಿಸುತ್ತಿರಲಿಲ್ಲ ಎಂದು ಶ್ರೀಶಾಂತ್​ ಹೇಳಿದ್ದಾರೆ.

ವೀರು ಭಾಯ್​, ಲಕ್ಷ್ಮಣ್​ ಭಾಯ್​ ಸೇರಿ ಮೂರ್ನಾಲ್ಕು ಮಂದಿ ಮಾತ್ರ ನನ್ನ ಮೇಲೆ ಆರೋಪ ಬಂದಿದ್ದರೂ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದರು. ಉಳಿದವರು ಎಲ್ಲ ಸಂಪರ್ಕ ಕಡಿದುಕೊಂಡರು. ನನಗೆ ನೋವಾಗುತ್ತಿತ್ತು. ಆದರೆ ಆ ಬಗ್ಗೆ ಏನೂ ಅಸಮಾಧಾನ ವ್ಯಕ್ತಪಡಿಸುತ್ತಿರಲಿಲ್ಲ. ಯಾಕೆಂದರೆ ಅವರ ಅಳುಕನ್ನು ನಾನು ಅರ್ಥ ಮಾಡಿಕೊಂಡಿದ್ದೆ. ನನ್ನ ಮೇಲೆ ಆರೋಪ ಬಂದಿದ್ದರಿಂದ ನನ್ನ ಜತೆ ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದರು ಎಂದು ಹೇಳಿದ್ದಾರೆ.

ಹಾಗೇ ಯಾರು ಮಾತನಾಡಲು ಇಷ್ಟಪಡುತ್ತಿರಲಿಲ್ಲವೋ ಅವರ ಬಳಿ ನಾನೂ ಹೋಗುತ್ತಿರಲಿಲ್ಲ. ಅದಾಗಲೇ ನ್ಯಾಯಾಲಯದಲ್ಲಿ ನನ್ನ ವಿರುದ್ಧದ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಹಾಗಾಗಿ ಎಲ್ಲ ರೀತಿಯಿಂದಲೂ ಮೌನ ವಹಿಸಿದ್ದೆ ಎಂದು ಶ್ರೀಶಾಂತ್​ ತಿಳಿಸಿದ್ದಾರೆ.

ಹಾಗೇ, ಸ್ವಲ್ಪ ವರ್ಷಗಳ ಬಳಿಕ ಒಂದೊಂದೇ ಬದಲಾವಣೆ ಆಯಿತು. ಮತ್ತೂ ಒಂದಷ್ಟು ಜನ ನನ್ನೊಂದಿಗೆ ಸಂಪರ್ಕಕ್ಕೆ ಬಂದರು. ಒಮ್ಮೆ ಏರ್​ಪೋರ್ಟ್​ನಲ್ಲಿ ಸಿಕ್ಕ ಹರ್ಭಜನ್​ ಸಿಂಗ್​ ಚೆನ್ನಾಗಿ ಮಾತನಾಡಿದರು ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಶ್ರೀಶಾಂತ್​ ಒ್ಟು 27 ಟೆಸ್ಟ್​ ಪಂದ್ಯಗಳನ್ನು, 53 ಏಕದಿನ ಪಂದ್ಯಗಳನ್ನು, 10 ಟಿ-20 ಪಂದ್ಯಗಳನ್ನು ಆಡಿದ್ದಾರೆ. ನಿಷೇಧದ ಅವಧಿ ಮುಗಿದ ಬಳಿಕ ಮತ್ತೊಮ್ಮೆ ಭಾರತ ಕ್ರಿಕೆಟ್​ ತಂಡದಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net