

ನವದೆಹಲಿ: ಒಂದು ಮದ್ಯದ ಬಾಟಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ವಿಶ್ವದ ಅತ್ಯಂತ ದುಬಾರಿ ಮದ್ಯ ( Most Expensive Liquor ) ಒಂದಿದೆ. ಅದರ ಬೆಲೆ ಕೇಳಿದರೆ ನೀವು ಬೆರಗಾಗೋದು ಖಂಡಿತ. ಈ ಮದ್ಯವನ್ನು ಖರೀದಿ ಮಾಡುವ ಹಣದಲ್ಲಿ ಮೆಟ್ರೋಪಾಲಿಟನ್ ನಗರದಲ್ಲಿ ಎರಡ್ಮೂರು ಸೈಟ್ ಖರೀದಿ ಮಾಡಿ ಐಷಾರಾಮಿ ಮನೆಯನ್ನೇ ನಿರ್ಮಿಸಬಹುದು. ಹೌದಾ... ಹಾಗಾದರೆ, ಆ ದುಬಾರಿ ಮದ್ಯ ಯಾವುದು? ಅದರ ಬೆಲೆ ಎಷ್ಟು? ವಿಶೇಷತೆ ಏನಿದೆ? ಅಷ್ಟೊಂದು ದುಬಾರಿ ಏಕೆ? ಎಲ್ಲಿ ಸಿಗುತ್ತೆ? ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡಿರಬಹುದು. ಆ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಅಂದಹಾಗೆ ವಿಶ್ವದ ಅತ್ಯಂತ ದುಬಾರಿ ಮದ್ಯದ ಹೆಸರು ಇಸಾಬೆಲ್ಲಾ ಇಸ್ಲೇ ( Isabella Islay ). ಇದೊಂದು ವಿಸ್ಕಿ ಆಗಿದೆ. ಈ ಮದ್ಯವನ್ನು ಖರೀದಿಸುವ ವ್ಯಕ್ತಿಯು ಅದನ್ನು ಕುಡಿಯುವುದಕ್ಕಿಂತ ಹೆಚ್ಚಾಗಿ ನೋಡಿಯೇ ಆನಂದಿಸುತ್ತಾನೆ. ಒಂದು ಬಾಟಲಿಯ ಬೆಲೆ ಸುಮಾರು 6.2 ಮಿಲಿಯನ್ ಡಾಲರ್ ( ಸುಮಾರು 52 ಕೋಟಿ ರೂಪಾಯಿ ). ಈ ಬೆಲೆಯಲ್ಲಿ ನೀವು ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಕೆಲವು ಫ್ಲಾಟ್‌ಗಳನ್ನು ಖರೀದಿಸಬಹುದು.
ಈ ಮದ್ಯಕ್ಕೆ ಇಷ್ಟೊಂದು ಬೆಲೆ ಏಕೆ ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ. ವಾಸ್ತವವಾಗಿ, ಈ ಮದ್ಯವನ್ನು ಸಂಗ್ರಹಿಸಿರುವ ಬಾಟಲಿಯು ಬಿಳಿ ಚಿನ್ನದಿಂದ ಮಾಡಲ್ಪಟ್ಟಿದೆ. ಇದು ನೋಡಲು ಪಾತ್ರೆಯಂತಿದೆ. ಅಲ್ಲದೆ 8500 ವಜ್ರಗಳು ಮತ್ತು 300 ಮಾಣಿಕ್ಯಗಳಿಂದ ಕೂಡಿದೆ. ಇದು ಸಿಂಗಲ್ ಮಾಲ್ಟ್ ಸ್ಕಾಚ್ ವಿಸ್ಕಿ. ಇದನ್ನು 2011, ಮೇ ತಿಂಗಳಲ್ಲಿ ಪ್ರಾರಂಭಿಸಲಾಯಿತು.
isabellasislay.com ವೆಬ್ಸೈಟ್ ಪ್ರಕಾರ ಇದು ವಿಶೇಷ ಆವೃತ್ತಿಯ ವಿಸ್ಕಿಯಾಗಿದೆ. ಇದನ್ನು ಆನ್ಲೈನ್ನಲ್ಲಿ ಎಲ್ಲಿಯೂ ಖರೀದಿ ಮಾಡಲಾಗದು. ವೆಬ್ಸೈಟ್ನಲ್ಲಿ ಕಾಂಟ್ಯಾಕ್ಟ್ ಅಸ್ ( ನಮ್ಮನ್ನು ಸಂಪರ್ಕಿಸಿ ) ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಇಮೇಲ್ ಐಡಿ ಕಾಣಿಸುತ್ತದೆ. ಬಹುಶಃ ಕಂಪನಿಯನ್ನು ಸಂಪರ್ಕಿಸುವ ಮೂಲಕ ಖರೀದಿಸಬಹುದಾಗಿದೆ.
ಇಸಾಬೆಲ್ಲಾ ಇಸ್ಲೇ ಅಲ್ಲದೆ ಇನ್ನೂ ಹಲವು ವಿಸ್ಕಿ ಬಾಟಲಿಗಳು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತವೆ. ಅವುಗಳಲ್ಲಿ ಮಕಲನ್ ಎಂ ಕೂಡ ಒಂದು. ಈ ಮದ್ಯದ ಬಾಟಲಿಯ ಬೆಲೆ 5 ಕೋಟಿ ರೂ.ಗೂ ಹೆಚ್ಚು. ಭಾರತದ ವಿಚಾರಕ್ಕೆ ಬರುವುದಾದರೆ, ರಾಂಪುರ ಸಿಗ್ನೇಚರ್ ರಿಸರ್ವ್ ಅನ್ನು ದೇಶದ ಅತ್ಯಂತ ದುಬಾರಿ ಮದ್ಯ ಎಂದು ಪರಿಗಣಿಸಲಾಗಿದೆ. ಇದರ ಬಾಟಲಿ ಬೆಲೆ ಸುಮಾರು 5 ಲಕ್ಷ ರೂಪಾಯಿ ಇದೆ. (ಏಜೆನ್ಸೀಸ್)