

ಸೊರಬ: ಮಳೆಗಾಲದಲ್ಲಿ ಹೆಚ್ಚಾಗುವ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಜನತೆ ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು ಕೆ.ಸಾಹುಕಾರ್ ಸಲಹೆ ನೀಡಿದರು.
ಪಟ್ಟಣದ ಹಳೇಸೊರಬ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಶಾಲಾ ವಿದ್ಯಾರ್ಥಿಗಳಿಂದ ತಾಲೂಕು ಮಟ್ಟದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸುತ್ತಲಿನ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ ಪ್ರದೇಶ, ಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಿಪ್ಪೆಗುಂಡಿಯಲ್ಲಿ ನೀರು ನಿಲ್ಲಿಸುವುದು ಹಾಗೂ ಘನ-ದ್ರವ್ಯ ತ್ಯಾಜ್ಯ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದರಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ. ತೆಂಗಿನಚಿಪ್ಪು, ಹೂದಾನಿ, ಟೈಯರ್ ಹಾಗೂ ಖಾಲಿ ಡಬ್ಬಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅನೇಕ ಸಾಂಕ್ರಾಮಿಕ ರೋಗಗಳು ಸೊಳ್ಳೆಗಳ ಮೂಲಕ ಹರಡುತ್ತದೆ. ಇದಕ್ಕೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಇಂತಹ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಗ್ರಾಮೀಣ ಭಾಗಕ್ಕೂ ಮಾಹಿತಿ ತಲುಪುತ್ತದೆ ಎಂಬ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ತಾಲೂಕಿನ 125 ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ. ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಮಾದರಿ ಪ್ರದರ್ಶನದಲ್ಲಿ ಪಾಲ್ಗೊಂಡ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕಾತುವಳ್ಳಿ ಸರ್ಕಾರಿ ಹಿಪ್ರಾ ಶಾಲೆ, ಆನವಟ್ಟಿಯ ಕೆಪಿಎಸ್ ಸರ್ಕಾರಿ ಹಿಪ್ರಾ ಶಾಲೆ ಹಾಗೂ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವು. ಪ್ರೌಢಶಾಲಾ ವಿಭಾಗದಲ್ಲಿ ಕೋಟಿಪುರದ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ, ಹಳೇಸೊರಬ ಸರ್ಕಾರಿ ಪ್ರೌಢಶಾಲೆ ಮತ್ತು ಕುಪ್ಪಗಡ್ಡೆ ರಾಷ್ಟ್ರೀಯ ಪ್ರೌಢಶಾಲೆ ದ್ವಿತೀಯ, ಕಡಸೂರು ಸರ್ಕಾರಿ ಪ್ರೌಢಶಾಲೆ ಮತ್ತು ಆನವಟ್ಟಿಯ ಸರ್ಕಾರಿ ಬಾಲಿಕಾ ಪ್ರೌಢಶಾಲೆಗಳು ತೃತೀಯ ಸ್ಥಾನ ಗಳಿಸಿದವು.
ತಾಪಂ ಇಒ ಡಾ. ಎನ್.ಆರ್.ಪ್ರದೀಪ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯಶಿಕ್ಷಕ ಬಿ.ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಕೃಷ್ಣಪ್ಪ ಓಟೂರು, ಇಸಿಒ ಸಂಜೀವಕುಮಾರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪದ್ಮಾವತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ನಾಗರಾಜ್, ಶಬ್ಬೀರ್ ಖಾನ್, ಯಶವಂತರಾಜ್, ಕಿರಿಯ ಆರೋಗ್ಯ ನಿರೀಕ್ಷಕ ಎಂ.ಜಿ.ಶಶಿಧರ್ ಇತರರಿದ್ದರು.