

ಪುರುಷೋತ್ತಮ ಪೆರ್ಲ ಕಾಸರಗೋಡು
‘ಕಾಡು ಬೆಳೆಸಿನಾಡು ಉಳಿಸಿ’ ಎಂಬ ಧ್ಯೇಯದೊಂದಿಗೆ ಇಲ್ಲೊಬ್ಬ ಶಿಕ್ಷಕರು ರಸ್ತೆ ಅಂಚಿಗೆ ಒಂದೂವರೆ ಸಾವಿರಕ್ಕೂ ಮಿಕ್ಕಿ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಶಿಕ್ಷಕ ಪಡ್ರೆ ಪೆರಿಯಾತ್ತಡ್ಕ ನಿವಾಸಿ ವೇಣುಗೋಪಾಲ್ ಈ ಸಾಧನೆ ನಡೆಸಿದವರು.
ಪ್ರಕೃತಿರಮಣೀಯ ಪ್ರದೇಶ ಬರಡಾಗುತ್ತಿರುವುದನ್ನು ಕಂಡು ಸಸಿಗಳನ್ನು ನೆಟ್ಟು ಬೆಳೆಸಲಾರಂಭಿಸಿದ ಅವರ ಕಾಯಕ ಇಂದು ಸಮಾಜಕ್ಕೆ ಮಾದರಿಯಾಗುತ್ತಿದೆ. ಆರೇಳು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಸಸಿ ನೆಡುವ ಯೋಜನೆಗಾಗಿ ರಸ್ತೆ ಬದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸಾಲೆತ್ತಡ್ಕದಿಂದ ಗಾಳಿಗೋಪುರ ಹಾದಿಯಾಗಿ ತಾವು ನಿತ್ಯ ಶಾಲೆಗೆ ಪ್ರಯಾಣ ಬೆಳೆಸುವ ಸಂದರ್ಭ ಹಾಗೂ ಶಾಲೆಯಿಂದ ಮನೆಗೆ ವಾಪಸಾಗುವ ಮಧ್ಯೆ ಸಮಯ ಹೊಂದಿಸಿ ಸಸಿ ನೆಟ್ಟು ಬೆಳೆಸಿದ್ದು, ಪ್ರಸಕ್ತ ಆಳೆತ್ತರಕ್ಕೆ ಬೆಳೆದು ನಿಂತಿದೆ. ರಸ್ತೆ ಬದಿಯಲ್ಲಿನ ಸುಂದರ ಮರದ ಸಾಲುಗಳು ಪರಿಸರ ಪ್ರೇಮಿಗಳನ್ನು ಆಕರ್ಷಿಸುವಂತಿದೆ.
ತನ್ನ ಶಾಲೆ ಪ್ರೇರಣೆ
ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ಬೋಳುಗುಡ್ಡೆಯನ್ನು ಹಸಿರಿನ ಹೊದಿಕೆಯನ್ನಾಗಿಸಿದ ಕೆಲಸ ವೇಣುಗೋಪಾಲ್‌ರಿಗೆ ತಂದುಕೊಟ್ಟಿದೆ. ಶಿಕ್ಷಕ ಉಮೇಶ್ ಪೆರ್ಲ, ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜತೆಗೂಡಿ ನೇಚರ್ ಕ್ಲಬ್ ಆಶ್ರಯದಲ್ಲಿ ಶಾಲಾ ವಠಾರದಲ್ಲಿ ಸಸಿ ನೆಟ್ಟು ಪೋಷಿಸುವ ಮೂಲಕ ಶಾಲಾ ವಠಾರವನ್ನು ಹಸಿರುವನವನ್ನಾಗಿ ಬದಲಾಯಿಸಿದ್ದಾರೆ. ಇದೇ ಪ್ರೇರಣೆಯಿಂದ ವೇಣುಗೋಪಾಲ್ ರಸ್ತೆ ಬದಿ ಸಸಿ ನೆಡುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಸ್ತೆ ಅಂಚಿನಲ್ಲಿ ನೆರಳು ನೀಡುವುದರ ಜತೆಗೆ ಗಾಳಿಗೋಪುರ ಪ್ರದೇಶದಲ್ಲಿ ಕಡಿದಾದ ಹೊಂಡಗಳಿರುವ ಪ್ರದೇಶದಲ್ಲಿ ಹಾದುಹೋಗುವ ರಸ್ತೆಗಳಿಂದ ವಾಹನಗಳು ಹೊರ ಚಲಿಸದಂತೆ ತಡೆಗಟ್ಟುವ ದೂರಾಲೋಚನೆಯೂ ಇದರಲ್ಲಿ ಅಡಕವಾಗಿದೆ.
ಬೆಳಗ್ಗೆ ಮತ್ತು ಸಂಜೆ ತನ್ನ ಬಿಡುವಿನ ವೇಳೆಯನ್ನು ಸಸಿ ನೆಡಲು ಬಳಸಿಕೊಂಡಿದ್ದ ವೇಣುಗೋಪಾಲ್ ಅವರು, ಏಳೆಂಟು ವರ್ಷ ಕಳೆದು ಹಿಂದೆ ನೋಡಿದಾಗ ಒಂದೂವರೆ ಸಾವಿರಕ್ಕೂ ಹೆಚ್ಚು ಮರಗಳು ಬೆಳೆದು ನಿಂತಿರುವುದನ್ನು ಕಂಡು ಹೆಮ್ಮೆಪಡುತ್ತಿದ್ದಾರೆ.
ಮರಗಳ ಮೇಲೆ ಕಿಡಿಗೇಡಿಗಳ ಕಣ್ಣು
ಜೋಪಾನವಾಗಿ ಬೆಳೆಸಿರುವ ಸಾಲುಮರಗಳಿಗೆ ಕಿಡಿಗೇಡಿಗಳು ಹಾನಿಯುಂಟು ಮಾಡಿರುವುದು ವೇಣುಗೋಪಾಲ್ ಹಾಗು ಪರಿಸರ ಪ್ರೇಮಿಗಳ ಮನಸ್ಸಿಗೆ ಹೆಚ್ಚಿನ ಘಾಸಿಯನ್ನುಂಟು ಮಾಡಿದೆ. ಹೆಚ್ಚಾಗಿ ಮಹಾಗನಿ ಮರವನ್ನು ಇಲ್ಲಿ ನೆಟ್ಟು ಬೆಳೆಸಿದ್ದಾರೆ. ಮೂರ‌್ನಾಲ್ಕು ವರ್ಷ ಪ್ರಾಯದ ಸಸಿಗಳನ್ನು ಕಿಡಿಗೇಡಿಗಳು ಕಡಿದು ನಾಶಗೊಳಿಸಿ ವಿಕೃತಿ ಮೆರೆದಿದ್ದಾರೆ. ರಸ್ತೆ ಬದಿ ಕಾಡುಪೊದೆಗಳ ತೆರವಿನ ವೇಳೆ ಮರೆಯಲ್ಲಿದ್ದ ಸಾಲುಮರಗಳನ್ನೂ ಕಿತ್ತುಹಾಕಲಾಗಿದೆ. 175ರಷ್ಟು ಸಸಿಗಳನ್ನು ಕುರುಹು ಕಾಣದಂತೆ ಕಡಿದು ನಾಶಗೊಳಿಸಲಾಗಿದೆ. ತೋಟಗಾರಿಕಾ ನಿಗಮದ ಗೇರುತೋಟ ವಿಭಾಗದ ಸಿಬ್ಬಂದಿ ಈ ಮರಗಳನ್ನು ಕಡಿದು ಹಾಕಿರುವ ಬಗ್ಗೆ ಸಾರ್ವಜನಿಕರು ದೂರಿದ್ದಾರೆ.
ಮಹತ್ತರ ಕಾರ್ಯ
ತಮ್ಮ ಈ ಸಾಧನೆಯನ್ನು ಯಾರೊಂದಿಗೂ ಹೇಳಿಕೊಳ್ಳದೆ, ಏಳೆಂಟು ವರ್ಷಗಳಿಂದ ವೇಣುಗೋಪಾಲ್ ನಿಸ್ವಾರ್ಥ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ತಾನು ಹವ್ಯಾಸವಾಗಿ ಆರಂಭಿಸಿದ ಸಸಿ ನೆಡುವ ಕಾರ್ಯಕ್ರಮ ಒಂದೂವರೆ ಸಾವಿರದ ಗಡಿ ದಾಟಿದ್ದು, ಮಹತ್ತರ ಕಾರ್ಯ. ಅವರ ಸಾಧನೆಯನ್ನು ಗುರುತಿಸಿ ಸಂಘ - ಸಂಸ್ಥೆಗಳು ಗೌರವಿಸಬೇಕಾದ ಅಗತ್ಯವಿದೆ ಎಂಬುದು ಸ್ಥಳೀಯ ನಿವಾಸಿಗಳ ಆಗ್ರಹ.
ಪೆರಿಯಾಲ್ತಡ್ಕದಿಂದ ಕನ್ನಟಿಕಾನ, ಪೆರ್ಲದಿಂದ ಉಕ್ಕಿನಡ್ಕ ವರೆಗೂ ರಸ್ತೆಬದಿ ಸಸಿ ನೆಟ್ಟು ಬೆಳೆಸಲಾಗಿದೆ. ತಾನು ಪ್ರಚಾರಕ್ಕಾಗಿ ಈ ಕಾರ್ಯ ನಡೆಸಿಲ್ಲ. ಸಸಿ ನೆಟ್ಟು ಬೆಳೆಸಿರುವುದು ಆತ್ಮಸಂತೋಷಕ್ಕೆ ಕಾರಣವಾಗಿದೆ. ಸಸಿಗಳನ್ನು ಹಾನಿಗೊಳಿಸಿರುವ ಕಿಡಿಗೇಡಿಗಳಿಗೆ ತಕ್ಕ ಶಾಸ್ತಿಯಾಗಬೇಕಾಗಿದೆ. ವೇಣುಗೋಪಾಲ್ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಶಿಕ್ಷಕ