

ಮೂಡುಬಿದಿರೆ: ನನೆಗುದಿಗೆ ಬಿದ್ದಿರುವ ಮೂಡುಬಿದಿರೆ ನೂತನ ಪುರಸಭೆ ಮಾರುಕಟ್ಟೆ ಕಟ್ಟಡ ವಿವಾದದ ತೀರ್ಪನ್ನು ಹೈಕೋರ್ಟ್ ಆ.8ಕ್ಕೆ ಮುಂದೂಡಿದೆ.
ಸಂರಕ್ಷಿತ ಸ್ಮಾರಕ ಪ್ರದೇಶದ ವ್ಯಾಪ್ತಿಯಲ್ಲಿ ಹೊಸ ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುವ ಮೂಡುಬಿದಿರೆ ಪುರಸಭೆ ಕ್ರಮವನ್ನು ಪ್ರಶ್ನಿಸಿ ಜೈಸನ್ ಮಾರ್ಷಲ್ ಸುವಾರಿಸ್, ಇತರರು ಸಲ್ಲಿಸಿರುವ ಪಿಐಎಲ್ ಹಾಗೂ ಅನುಮತಿ ನಿರಾಕರಿಸಿರುವ ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ ಕ್ರಮವನ್ನು ಪ್ರಶ್ನಿಸಿ ವಿಚಾರಣೆ ನಡೆದಿದ್ದು, ಜುಲೈ 24ಕ್ಕೆ ಆದೇಶ ಪ್ರಕಟಿಸುವುದಾಗಿ ಹೇಳಲಾಗಿತ್ತು.
ಮೂಡುಬಿದಿರೆ ಹಳೇ ಮಾರುಕಟ್ಟೆ ಕಟ್ಟಡ ನೆಲಸಮಗೊಳಿಸಿ ಅಲ್ಲಿದ್ದ ವ್ಯಾಪಾರಿಗಳನ್ನು ತಾತ್ಕಾಲಿಕ ಎಂದು ಸ್ವರಾಜ್ಯ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಪಿಐಎಲ್‌ನಿಂದಾಗಿ ಕಟ್ಟಡ ನಿರ್ಮಾಣಕ್ಕೆ ತಡೆಯಾಗಿ, ಕಾಮಗಾರಿ ಮುಂದುವರಿಯದೆ ಹಾಗೆಯೇ ಉಳಿದಿದೆ. ಹೀಗಾಗಿ ಮಾರುಕಟ್ಟೆ ಈಗ ಸ್ಥಳಾಂತರಿತ ಜಾಗದಲ್ಲೇ ಮುಂದುವರಿದಿದೆ.