ತೋಟಗಳಲ್ಲಿ ಮಂಗಗಳ ದಾಂಧಲೆ

monkey
ಮಂಗಗಳು.
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹಳ್ಳಿಯ ತೋಟಗಳಲ್ಲಿ ಮಂಗಗಳದ್ದೆ ಕಾರುಬಾರು. ನೂರಾರು ಬೊಂಡಗಳು, ಬಾಳೆ ಕಾಯಿ, ತರಕಾರಿ, ಹಣ್ಣು ಹಂಪಲುಗಳು ನಾಶ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಲಗ್ಗೆ ಇಡುವುದು ಗ್ರಾಮಾಂತರ ಪ್ರದೇಶದಲ್ಲಿ ಕಂಡು ಬರುವ ನಿತ್ಯದ ಚಿತ್ರಣ. ಪೇಟೆಯಲ್ಲಿ ಅಂಗಡಿ, ಹೋಟೆಲ್, ಮನೆಗಳಿಗೆ ನುಗ್ಗಿ ತಿಂಡಿ, ಸಾಮಗ್ರಿ ದೋಚುತ್ತಿರುವ ದೃಶ್ಯ ಸಾಮಾನ್ಯ.

ದೂರದೂರುಗಳಿಂದ ಮಂಗಗಳನ್ನು ಹಿಡಿದು ಆಗುಂಬೆ ತಟದಲ್ಲಿ ಬಿಡುತ್ತಿದ್ದು, ಹೆಬ್ರಿ ನಾಡ್ಪಾಲು, ಸೀತಾನದಿ, ಮಡಾಮಕ್ಕಿ ಪರಿಸರದಲ್ಲಿ ಮಂಗಗಳ ಕಾಟ ತಾರಕ್ಕೇರಿತ್ತು. ಸ್ಥಳೀಯರ ಆಕ್ಷೇಪದಿಂದ ಮಂಗಗಳನ್ನು ತಂದು ಬಿಡುವುದು ನಿಲ್ಲಿಸಿದರು.

ಹೋರಾಟ ಸಮಿತಿ ರಚನೆ

ಪೆರ್ಡೂರಿನಲ್ಲಿ ಕೇಂದ್ರ ಸ್ಥಾನ ಹೊಂದಿಕೊಂಡಂತೆ ಕಾಡು ಪ್ರಾಣಿಗಳ ಉಪಟಳದ ವಿರುದ್ಧ ಹೋರಾಟಕ್ಕೆ ಹೊಸ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದು ವಿವಿಧ ಹೋರಾಟ, ಮನವಿ ಸಲ್ಲಿಕೆ, ಜಾಗೃತಿ ಅಭಿಯಾನ ಜತೆಗೆ ಮಂತ್ರಿಗಳು, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಉನ್ನತಾಧಿಕಾರಿಗಳ ಕೂಡುವಿಕೆಯಲ್ಲಿ ಪೆರ್ಡೂರಿನಲ್ಲಿ ಸಮಸ್ಯೆ ಬಗೆಹರಿಸಲು ಸಮಾಲೋಚನೆ ಹಾಗೂ ಮಂಗಗಳ ಹಾವಳಿ ತಪ್ಪಿಸಲು ಯೋಚನೆ, ಯೋಜನೆ ಕುರಿತು ಬೃಹತ್ ಸಭೆ ನಡೆದಿತ್ತು.

ಮಂಕಿ ಪಾರ್ಕ್ ವಿಚಾರ ಪ್ರಸ್ತಾಪ

ಕೆಲ ವರ್ಷಗಳ ಹಿಂದೆ ಮಂಗಗಳ ಕಾಟಕ್ಕೆ ಕಡಿವಾಣ ಹಾಕಲು ಜಿಲ್ಲೆಯಲ್ಲೊಂದು ಬೃಹತ್ ಮಂಕಿ ಪಾರ್ಕ್ ಸ್ಥಾಪನೆ, ಮಂಗಗಳ ಸಂತಾನಹರಣ ಸೇರಿ ವಿವಿಧ ಗಂಭೀರ ವಿಚಾರ ಚರ್ಚೆಗೆ ಬಂದಿದ್ದು ಅದು ಚರ್ಚೆಯಲ್ಲೇ ಉಳಿದು ಮಂಗಗಳ ಕಾಟ ಮಾತ್ರ ತಪ್ಪಿಲ್ಲ. ಜನರ ಆಕ್ರೋಶಕ್ಕೆ ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕಾಡಿನಲ್ಲೇ ಹಣ್ಣಿನ ಗಿಡ ಬೆಳೆಸಲು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು.

ಎಳನೀರು ಟಾರ್ಗೆಟ್

ಬಹುತೇಕ ಕಡೆ ತೆಂಗಿನ ತೋಟದಲ್ಲಿ ಸೀಯಾಳವನ್ನು ಕಿತ್ತು ಹಾಕುತ್ತಿದ್ದು, ಕೃಷಿಕರಿಗೆ ಮುಂದೆ ತೆಂಗಿನಕಾಯಿ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಕೆಲವೆಡೆ ಬೃಹತ್ ಪ್ರಮಾಣದಲ್ಲಿ ಹಾನಿಯಾಗಿದೆ.

ಉರುವಲು ಮಿಶ್ರಿತ ಗಿಡ ನಾಟಿ

ಅಂದಿನ ಸಭೆಯಲ್ಲಿ ಹಣ್ಣಿನ ಗಿಡ ನೆಡುವ ವಿಚಾರ ಪ್ರಸ್ತಾಪಿಸಿದ್ದು ಬಿಟ್ಟರೆ ಗಿಡ ನೆಡಲು ಕ್ರಮ ಕೈಗೊಂಡಿಲ್ಲ. ಈ ಭಾರಿ ಅರಣ್ಯ ಇಲಾಖೆ ನೆಟ್ಟ ಗಿಡಗಳಲ್ಲಿ ಉರುವಲು ಮಿಶ್ರಿತ ಬೋಗಿ, ಗುಗ್ಗುಳ, ದೂಪ ಮತ್ತಿತರ ಗಿಡಗಳನ್ನು ಹೆಚ್ಚು ನೆಟ್ಟಿದ್ದು ನೇರಳೆ ಗಿಡ ಹೊರತು ಹಣ್ಣಿನ ಗಿಡಗಳನ್ನೇ ನೆಟ್ಟಿಲ್ಲ. ನಮಗೆ ಇಲಾಖೆ ಮತ್ತು ಉನ್ನತಾಧಿಕಾರಿಗಳ ನಿರ್ದೇಶನದಂತೆ ಅರಣ್ಯ ನೆಡುತೋಪುಗಳಿಗೆ ಗಿಡಗಳ ಸರಬರಾಜು ಆಗುತ್ತಿದೆ. ಹಣ್ಣಿನ ಗಿಡ ನೆಡಲು ನಿರ್ದೇಶನ ಬಂದಿಲ್ಲ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಳ್ಳಿಗಳಲ್ಲಿ ಮಂಗಗಳ ಕಾಟದಿಂದ ಕೃಷಿಕರು ಕಂಗಲಾಗಿದ್ದು, ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಸಮಗ್ರ ಯೋಜನೆ ರೂಪಿಸಿದರೆ ಕಾಡುಪ್ರಾಣಿಗಳಲ್ಲಿ ಮಂಗಗಳ ಹಾವಳಿಯನ್ನಾದರೂ ತಪ್ಪಿಸಬಹುದು. ಹಿಂದೆ ಸಮಸ್ಯೆಗಳ ನಿವಾರಣೆಗೆಂದೇ ಪೆರ್ಡೂರಿನಲ್ಲಿ ಬೃಹತ್ ಸಭೆ ನಡೆಸಲಾಗಿತ್ತು. ಆದರೆ ಏನೂ ಪ್ರಯೋಜನವಾಗಿಲ್ಲ. -ಮಿಥುನ್ ಶೆಟ್ಟಿ ಚಾರ. ಕೃಷಿಕರು, ಹೋರಾಟಗಾರರು ಕಾಡಿನಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸರ್ವಋತು ಹಣ್ಣು ಕೊಡುವ ಹಣ್ಣಿನ ಗಿಡ ನಾಟಿಯಿಂದ ಸ್ವಲ್ಪ ಮಟ್ಟಿಗೆ ಮಂಗಗಳ ಹಾವಳಿ ತಪ್ಪಿಸಬಹುದು. ವಿನಾಶದಂಚಿನಲ್ಲಿರುವ ಗಿಡಗಳನ್ನು ಬೆಳೆಸಬೇಕು. ಕಾಡು ಪ್ರಾಣಿಗಳು ತಿನ್ನುವ ಗಿಡ ಮರಗಳನ್ನು ಉಳಿಸಿ ಬೆಳೆಸಿದರೆ ಮಂಗ ಮತ್ತು ಕೆಲವು ಕಾಡುಪ್ರಾಣಿಗಳು ಕೃಷಿಗೆ ಲಗ್ಗೆಯಿಡುವುದನ್ನು ತಪ್ಪಿಸಬಹುದು. -ಗೋಪಾಲ ಕುಲಾಲ್ ಮುನಿಯಾಲು, ಅಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಉಡುಪಿ ಜಿಲ್ಲಾ ಘಟಕ ಜನರು ತಿಳಿದಂತೆ ಮನುಷ್ಯ ತಿನ್ನುವ ಹಣ್ಣುಗಳು ಮಾತ್ರ ಹಣ್ಣುಗಳಲ್ಲ. ಪ್ರಾಣಿ ಪಕ್ಷಿಗಳಿಗೆ ಬೇಕಾದ ವಿವಿಧ ರೀತಿಯ ಹಣ್ಣುಗಳ ನೆಡುವಿಕೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಆದ್ಯತೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ಬೇಕಾದ ಹಣ್ಣುಗಳ ನೆಡುವಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. -ಸಿದ್ದೇಶ್ವರ, ಆರ್‌ಎಫ್‌ಒ, ಸಾಮಾಜಿಕ ಅರಣ್ಯ ವಿಭಾಗ ಹೆಬ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net