

ಜೈಪುರ: ಕೊಲೆ ಪ್ರಕರಣದ ಆರೋಪಿಗೆ ಇನ್ನೇನು ಶಿಕ್ಷೆ ವಿಧಿಸುವ ಕಾಲ ಹತ್ತಿರ ಬಂದೇ ಬಿಟ್ಟಿತು, ನಾವು ಪ್ರಕರಣವನ್ನು ಕೈ ತೊಳೆದುಕೊಳ್ಳುತ್ತೇವೆ ಎಂದುಕೊಂಡಿದ್ದ ಪೊಲೀಸರಿಗೆ ಕೋತಿ ಶಾಕ್ ನೀಡಿದೆ.
ಕೊಲೆ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಪೊಲೀಸರ ಬಳಿಯಿದ್ದ ಸಾಕ್ಷ್ಯದೊಂದಿಗೆ ಕೋತಿ ಪರಾರಿಯಾಗಿರುವ ವಿಚಿತ್ರ ಘಟನೆ ರಾಜಸ್ಥಾನದಲ್ಲಿ ನಡೆದಿದೆ.2016ರಲ್ಲಿ ನಡೆದ ಕೊಲೆ ಪ್ರಕರಣ ಇದಾಗಿದ್ದು, 15 ಮಂದಿಯ ಸಾಕ್ಷ್ಯ ಹಾಗೂ ಶಸ್ತ್ರಾಸ್ತ್ರವಿದ್ದ ಚೀಲವನ್ನೇ ಹೊತ್ತೊಯ್ದಿದೆ. ಇದೀಗ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ವಿಧಿ ಇಲ್ಲದೇ ನ್ಯಾಯಾಲಯಕ್ಕೆ ಆರೋಪಿಯೊಂದಿಗೆ ಹಾಜರಾದ ಪೊಲೀಸರು, ಸದ್ಯ ಇನ್ನಷ್ಟು ದಿನ ಸಾಕ್ಷ್ಯ ಪತ್ತೆಗಾಗಿ ಅವಕಾಶ ಕೋರಿದ್ದಾರೆ. ಇರುವ ಸಾಕ್ಷ್ಯವನ್ನು ಕೋತಿ ಎತ್ತುಕೊಂಡು ಹೋಗಿದೆ ಎಂದಿದ್ದಾರೆ. ಸದ್ಯ ಪ್ರಕರಣವನ್ನು ಮುಂದೂಡಿರುವ ಕೋರ್ಟ್ ಪೊಲೀಸರಿಗೆ ಮತ್ತೊಂದು ಅವಕಾಶವನ್ನೂ ನೀಡಿದೆ.
ನಡೆದದ್ದೇನು?: ಆರೋಪಿಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲು ಬರುತ್ತಿದ್ದ ವೇಳೆ ವಾಹನ ನಿಲ್ಲಿಸಲಾಗಿತ್ತು. ಚಾಕು ಚೂರಿಯೊಂದಿಗಿದ್ದ ಬ್ಯಾಗನ್ನು ಅಲ್ಲೇ ಪಕ್ಕದಲ್ಲಿದ್ದ ಮರದ ಕೆಳಗೆ ಇಡಲಾಗಿತ್ತು. ಇದೇ ವೇಳೆ ಎಲ್ಲಿಂದಲೋ ಬಂದ ಕೋತಿ ಸಾಕ್ಷಿ ಇದ್ದ ಬ್ಯಾಗನ್ನು ಹೊತ್ತು ಪರಾರಿಯಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ವಿವರಣೆ ನೀಡಿದ್ದಾರೆ.