

ಪ್ರಮುಖ ಮುಖ್ಯಾಂಶಗಳು
ಖ್ಯಾತ ಮಾಲಿವುಡ್ ನಟ ಮೋಹನ್‌ಲಾಲ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕಳೆದ ವರ್ಷ ಆರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಅವರು ಈ ವರ್ಷ ಆ ಸಂಖ್ಯೆ ಹೆಚ್ಚಿಸುವ ಹಂತದಲ್ಲಿದ್ದಾರೆ. ಈಗಾಗಲೇ ಅವರು ನಟಿಸಿರುವ ‘ಪೇಟ್ರಿಯಾಟ್’, ‘ದೃಶ್ಯಂ 3’ ಹಾಗೂ ‘ತುಡಕ್ಕಮ್’ ಚಿತ್ರಗಳು ಈ ವರ್ಷ ರಿಲೀಸ್ ಆಗಿದ್ದು, ಇನ್ನು ಕೆಲ ಚಿತ್ರಗಳು ತೆರೆಗೆ ಬರುವ ಸಿದ್ಧತೆಯಲ್ಲಿವೆ. ಹೀಗಿರುವಾಗಲೇ, ಮೋಹನ್‌ಲಾಲ್ ತಮ್ಮ ಮುಂದಿನ ಸಿನಿಮಾಗಳ ಅಪ್‌ಡೇಟ್ ನೀಡಿದ್ದು, ಸದ್ಯ ಏಳು ಚಿತ್ರಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ ಎಂದು ಸ್ವತಃ ಘೋಷಿಸಿಕೊಂಡಿದ್ದಾರೆ. ಮುಂದಿನ ಸಿನಿಮಾಗಳ ನಿರ್ದೇಶಕರ ಹೆಸರನ್ನು ಕ್ರಮವಾಗಿ ಅವರು ಹಂಚಿಕೊಂಡಿದ್ದು, ವಿಷ್ಣು ಮೋಹನ್, ಅನೂಪ್ ಸತ್ಯನ್, ಪ್ರಿಯದರ್ಶನ್, ದಿಲೇಶ್ ಪೋತನ್, ಸತ್ಯಂ ಅಂತಿಕಾಡ್, ಜುಡಾ ಆ್ಯಂಟನಿ ಜೋಸೆಫ್ ಹಾಗೂ ಜೀತು ಜೋಸೆಫ್ ಜತೆ ಕೆಲಸ ಮಾಡಲಿದ್ದಾರೆ. ಈ ಪಟ್ಟಿಯ ಬಹುತೇಕ ಎಲ್ಲ ನಿರ್ದೇಶಕರ ಜತೆ ಮೋಹನ್ ಲಾಲ್ ಈ ಹಿಂದೆ ಸಿನಿಮಾ ಮಾಡಿದ್ದು, ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಮೋಹನ್ ಲಾಲ್ ಅಭಿನಯದ 366ನೇ ಸಿನಿಮಾ ‘ಅತಿಮನೋಹರಂ’ ಡಿಸೆಂಬರ್‌ಗೆ ರಿಲೀಸ್ ಆಗಲಿದೆ. ಈಗಾಗಲೇ ವಿಷ್ಣು ಮೋಹನ್ ನಿರ್ದೇಶನದ ಚಿತ್ರೀಕರಣ ಆರಂಭಿಸಲಾಗಿದೆ. ಈ ಹೊಸ ಏಳು ಸಿನಿಮಾಗಳು ಸೇರಿದರೆ ಮೋಹನ್‌ಲಾಲ್ ಅಭಿನಯದ ಒಟ್ಟು ಚಿತ್ರಗಳ ಸಂಖ್ಯೆ 373 ಆಗಲಿದೆ. 66ರ ಹರೆಯದರಲ್ಲೂ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಬಗ್ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. -ಏಜೆನ್ಸೀಸ್.