ಕಲ್ಯಾಣಿ, ನಿವಿನ್​ ಪೌಲಿ... ಬ್ಯಾಕ್​ ಟು ಬ್ಯಾಕ್ ಸೂಪರ್​ಹಿಟ್​ಗೆ ಸಜ್ಜಾಗಿರುವ ಮಾಲಿವುಡ್​ಗೆ ಅದೊಂದು ವಿಚಾರದಲ್ಲಿ ಸಮಸ್ಯೆ | Mollywood ​

ಮಲಯಾಳಂ ಚಿತ್ರರಂಗದ ಸಿನಿಮಾಗಳು
ಮಲಯಾಳಂ ಚಿತ್ರರಂಗದ ಸಿನಿಮಾಗಳು
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚಿನ ಸಿನಿಮಾಗಳಿಂದಲೂ ಮಲಯಾಳಂಗೆ ದೊಡ್ಡ ಹಿಟ್​ಗಳು
  • ಸರಣಿ ಸೂಪರ್​ಹಿಟ್​ ಸಿನಿಮಾಗಳನ್ನು ಕೊಡಲು ಸ್ಟಾರ್​ಗಳು ಸಿದ್ಧ
  • ಬಿಗ್ ಬಜೆಟ್​ ಅಲ್ಲದಿದ್ದರೂ ಮಾಲಿವುಡ್​ಗೆ ಕಾಡುತ್ತಿದೆ ಇದೊಂದು ಸಮಸ್ಯೆ
ಕೇರಳ: 'ದ್ರಿದಮ್'​, 'ನೈಟ್​ಡ್ರೈವ್'​, 'ಲೋಕಾ ಚಾಪ್ಟರ್​ 1', 'ರೇಖಾಚಿತ್ರಂ', 'ಸಂಭಾವಂ ಆದ್ಯಂ ಒನ್ನು' ಸೇರಿದಂತೆ ಹಲವು ಸಿಂಪಲ್​ ಕಥೆಗಳಿಂದಲೇ ಬೆಳ್ಳಿಪರದೆಯಲ್ಲಿ ಸಿನಿಪ್ರೇಮಿಗಳನ್ನು ಮೋಡಿ ಮಾಡುವ ಮಾಲಿವುಡ್​ ಮಂದಿ, ಕೇವಲ ಸ್ಟೋರಿಗಳಿಂದ ಮಾತ್ರವಲ್ಲ, ಹಾಕಿರುವ ಬಂಡವಾಳವನ್ನು ಡಬಲ್​ ಮಾಡಿಕೊಳ್ಳುವುದರ ಜತೆ ನೋಡುಗರ ವಿಶ್ವಾಸವನ್ನು ಗಳಿಸುವುದು ಗಮನಾರ್ಹ. ಇದಕ್ಕೆ ಇತ್ತೀಚಿನ ಹಲವಾರು ಸಿನಿಮಾಗಳೇ ಜ್ವಲಂತ ಸಾಕ್ಷಿ.
ಸಿನಿ ಮಾರುಕಟ್ಟೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದರೆ, ಇತ್ತ ಮಾಲಿವುಡ್​ ಹಿಟ್ ಮೇಲೆ ಹಿಟ್​ ಚಿತ್ರಗಳನ್ನು ಕೊಡುತ್ತಿದೆ. ಅದು ಯಾವುದೇ ಹೆಚ್ಚಿನ ಪ್ರಚಾರಗಳ ಗಿಮಿಕ್​ ಇಲ್ಲದೆಯೇ. ಅತ್ಯಂತ ಕಡಿಮೆ ಬಜೆಟ್​ ಹಾಗೂ ಹೊಸಬರನ್ನು ಹಾಕಿಕೊಂಡೇ ಇತರೆ ಚಿತ್ರರಂಗದ ಸಿನಿಪ್ರೇಮಿಗಳ ಗಮನ ಸೆಳೆಯುವ ಮಲಯಾಳಂ ಸಿನಿಮಾಗಳು, ತೆರೆಕಂಡ ಬಳಿಕವೇ ಜೋರಾಗಿ ಸದ್ದು ಮಾಡುವುದು ಹೆಚ್ಚಾಗಿದೆ. ಬಿಗ್ ಬಜೆಟ್​, ದೊಡ್ಡ ತಾರಾಗಣ, ಸಖತ್​ ಹೈಪ್​ ಕೊಡದೆಯೇ ತಮ್ಮ ಚಿತ್ರಗಳನ್ನು ಪ್ರೇಕ್ಷಕರ ಮುಂದಿಡುತ್ತಿರುವ ಸ್ಟಾರ್​ ನಟರಿಗೆ ಇದೀಗ ಒಂದು ಗೊಂದಲ ಎದುರಾಗಿದೆ.
ಸದ್ಯ ಮಲಯಾಳಂ ಚಿತ್ರರಂಗದ ಹಲವು ಸ್ಟಾರ್​ಗಳಿಗೆ ಈ ಪರಿಸ್ಥಿತಿ ಕಾಡತೊಡಗಿದೆ. ಬಾಕ್ಸ್​ ಆಫೀಸ್​ನಲ್ಲಿ ಸೂಪರ್ ಹಿಟ್ ಗಳಿಸಿದರೂ ಮುಂದಿನ ಪ್ರಾಜೆಕ್ಟ್​ಗಳ ಓಪನಿಂಗ್ ಮತ್ತು ಸಿನಿಮಾಗಳ ಬಿಡುಗಡೆಯಲ್ಲಿ ಯಾವುದೇ ಸಣ್ಣ ತಪ್ಪಾದರೂ ಯಶಸ್ಸಿನ ಗ್ರಾಫ್ ಕುಸಿಯುತ್ತದೆ ಎಂಬ ಭಯ ಸ್ಪಷ್ಟವಾಗಿ ಗೋಚರಿಸಿದೆ. ಪರ್ಫೆಕ್ಟ್ ರಿಲೀಸ್ ಡೇಟ್ ಮತ್ತು ಸರಿಯಾದ ಪ್ಲ್ಯಾನಿಂಗ್ ಹುಡುಕಾಟದಲ್ಲಿ ಸದ್ಯ ಸ್ಟಾರ್​ ನಟರಲ್ಲಿ ಗೊಂದಲ ಸೃಷ್ಟಿಯಾಗಿದೆ.
ಸೌತ್​ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್, 'ಲೋಕ: ಚಾಪ್ಟರ್​ 1: ಚಂದ್ರ' ಸೂಪರ್​ಹೀರೋ ಚಿತ್ರದ ಮೂಲಕವೇ ಭಾರಿ ಯಶಸ್ಸನ್ನು ಕಂಡಿದ್ದಾರೆ. ಈಗ ಅದರ ಸೀಕ್ವೆಲ್​ 'ಲೋಕ: 2' ಮೇಲೆ ಫ್ಯಾನ್ಸ್​ಗಳ ಚಿತ್ತ ಮೂಡಿದೆ. ಈ ಸೀಕ್ವೆಲ್‌ನ ಚಿತ್ರೀಕರಣವು ಈ ವರ್ಷದ ಸೆಪ್ಟೆಂಬರ್​ನಿಂದ ಪ್ರಾರಂಭವಾಗಲಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಕಲ್ಯಾಣಿ ಅವರು ರಣವೀರ್ ಸಿಂಗ್ ಜತೆ ಜೈ ಮೆಹ್ತಾ ನಿರ್ದೇಶನದ ಹೈಬಜೆಟ್ ಜೊಂಬಿ ಆ್ಯಕ್ಷನ್-ಥ್ರಿಲ್ಲರ್ 'ಪ್ರಳಯ'ದೊಂದಿಗೆ ಬಾಲಿವುಡ್‌ಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ.
ಇನ್ನು, ತಮಿಳಿನಲ್ಲಿ ನಟ ಜಯಂ ರವಿ ಜತೆ 'ಜೀನಿ' ಮತ್ತು ಕಾರ್ತಿ ಅವರೊಂದಿಗೆ 'ಮಾರ್ಷಲ್' ಚಿತ್ರಗಳು ಪೈಪೋಟಿಯಲ್ಲಿವೆ. ಇಷ್ಟು ದೊಡ್ಡ ಚಿತ್ರಗಳು ಕೈಯಲ್ಲಿದ್ದು, ಸರಿಯಾದ ಪ್ರೊಡಕ್ಷನ್​ ಸಮಯ ಮತ್ತು ರಿಲೀಸ್​ ಸಮಯವನ್ನು ಪ್ಲ್ಯಾನ್​ ಮಾಡಿಕೊಳ್ಳುವುದು ಕಲ್ಯಾಣಿಗೆ ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ಯಾವ ಸಮಯದಲ್ಲಿ ತಮ್ಮ ಚಿತ್ರಗಳನ್ನು ತೆರೆಗೆ ತಂದರೆ ಲಾಭದಾಯಕ ಎಂಬುದು ಈ ಗೊಂದಲಕ್ಕೆ ಕಾರಣವಾಗಿರಬಹುದು.
ನಟ, ನಿರ್ದೇಶಕ ಬಸಿಲ್ ಜೋಸೆಫ್ ಅವರ ಗ್ರಾಫ್ ಕೂಡ ದಿನದಿಂದ ದಿನಕ್ಕೆ ಏರುತ್ತಿದೆ. ಅವರ ಚಿತ್ರ 'ಅತಿರಾಡಿ' ಮೇ 2026ರಲ್ಲಿ ಬಿಡುಗಡೆಗೊಂಡು, ಉತ್ತಮ ಯಶಸ್ಸನ್ನು ಕಂಡಿತು. ಅದರಲ್ಲೂ ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್ ಅಲ್ಲು ಅರ್ಜುನ್ ಜತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಮಧ್ಯೆ, ಮಾಲಿವುಡ್​ ಪ್ರೇಕ್ಷಕರ ಗಮನ ಸೆಳೆದಿರುವ ಈ ನಟನ ಕೈಯಲ್ಲಿಯೂ ಹಲವು ಬಿಗ್ ಚಿತ್ರಗಳಿವೆ.
ಮಲಯಾಳಂ ಸ್ಟಾರ್ ಹೀರೋ ನಿವಿನ್ ಪೌಲಿ ಬಹುತೇಕ ಚಿತ್ರಪ್ರೇಮಿಗಳಿಗೆ ಗೊತ್ತಿರುವ ಹೆಸರೇ. 'ಪ್ರೇಮಂ' ನಟ ಎಂದರೆ ಹಲವರಿಗೆ ಇನ್ನೂ ಬೇಗೆ ತಿಳಿಯುತ್ತೆ. ಈಗ ಮತ್ತೆ ಹಿಟ್​ಗಳ ಟ್ರ್ಯಾಕ್‌ಗೆ ಮರಳಿರುವ ಪೌಲಿ, ಬ್ಯಾಕ್ ಟು ಬ್ಯಾಕ್ ಸೂಪರ್​​ಹಿಟ್​ಗಳನ್ನು ಕೊಡಲು ಮುಂದಾಗಿದ್ದಾರೆ. ಗಿರೀಶ್ ಎ.ಡಿ ನಿರ್ದೇಶನದ, ಮಮಿತಾ ಬೈಜು ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಬೆತ್ಲೆಹಂ ಕುಟುಂಬ ಯೂನಿಟ್' ಇದೇ ಆ.21ರಂದು ತೆರೆಗೆ ಬರಲಿದೆ. ಇದರೊಂದಿಗೆ ರೇಸಿಂಗ್ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬಂದಿರುವ ನಿವಿನ್ ಅವರ 50ನೇ ಚಿತ್ರ 'ವಿಜಯಂ' ಮತ್ತು 51ನೇ ಸಿನಿಮಾಗಳ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇದೆಲ್ಲವನ್ನೂ ಹೇಗೆ ಹ್ಯಾಂಡಲ್​ ಮಾಡಲಿದ್ದಾರೆ ಮತ್ತು ಬಿಗ್ ಚಿತ್ರಗಳ ಜತೆ ಕ್ಲ್ಯಾಶ್​ ಆಗದಂತೆ ರಿಲೀಸ್​ ದಿನಾಂಕಗಳನ್ನು ಸರಿ ಹೊಂದಿಸುವುದು ಒಂದು ರೀತಿ ಸವಾಲೇ ಸರಿ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net