ತೆಲುಗಿನ ‘ಲೆನಿನ್’ ಸಿನಿಮಾ ಯಶಸ್ಸಿನ ಬಳಿಕ ನಟಿ ಭಾಗ್ಯಶ್ರೀ ಬೋರ್ಸೆ ಅದೃಷ್ಟ ಬದಲಾಗಿದ್ದು, ಮತ್ತಷ್ಟು ಬಿಜಿಯಾಗುತ್ತಿದ್ದಾರೆ. ಕೇವಲ ಭಾಗ್ಯಶ್ರೀ ಅಲ್ಲದೇ, ನಟರಾದ ಅಖಿಲ್ ಅಕ್ಕಿನೇನಿ ಮತ್ತು ಕನ್ನಡಿಗ ಪ್ರಮೋದ್ ಪಂಜುಗೂ ಈ ಸಿನಿಮಾ ದೊಡ್ಡ ಬ್ರೇಕ್ ನೀಡಿತ್ತು. ಇನ್ನು ತೆಲುಗಿನ ‘ಮಿ.ಬಚ್ಚನ್’ (2024) ಮೂಲಕ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಭಾಗ್ಯಶ್ರೀ ಬಳಿಕ ‘ಕಿಂಗ್‌ಡಂ’, ‘ಆಂಧ್ರ ಕಿಂಗ್ ತಾಲೂಕಾ’, ತಮಿಳಿನ ‘ಕಾಂತಾ’ದಲ್ಲೂ ನಟಿಸಿದ್ದರು. ಆದರೆ, ಯಾವ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಕಂಡಿರಲಿಲ್ಲ. ಇದೀಗ ‘ಲೆನಿನ್’ ನಟಿಯ ಕೈ ಹಿಡಿದಿದ್ದು, ಭಾಗ್ಯಶ್ರೀ ಭಾಗ್ಯದ ಬಾಗಿಲು ತೆರೆದಿದೆ. ಇದೀಗ ಅವರು ಮಲಯಾಳಂ ಚಿತ್ರರಂಗಕ್ಕೆ ಡೆಬ್ಯೂ ಮಾಡುತ್ತಿದ್ದಾರೆ. ‘ಆಪರೇಷನ್ ಗಂಗಾ’ ಚಿತ್ರದ ಮೂಲಕ ಖ್ಯಾತ ನಟ ಮೋಹನ್ ಲಾಲ್ ಜತೆ ನಟಿಸುವ ಅವಕಾಶ ಪಡೆದಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾ ಘೋಷಣೆಯಾಗಿದ್ದು, ವಿಷ್ಣು ಮೋಹನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 2022ರಲ್ಲಿ ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವಿನ ಯುದ್ಧದಲ್ಲಿ ಸಂತ್ರಸ್ತರಾಗಿದ್ದ ಭಾರತೀಯರನ್ನು ರಕ್ಷಣೆ ಮಾಡಲು ಕೇಂದ್ರ ಸರ್ಕಾರ ‘ಆಪರೇಷನ್ ಗಂಗಾ’ ಕಾರ್ಯಾಚರಣೆ ಕೈಗೊಂಡಿತ್ತು. ಈ ಮಿಷನ್‌ಅನ್ನೇ ಆಧಾರವಾಗಿಟ್ಟುಕೊಂಡು ಬಿಗ್‌ಬಜೆಟ್‌ನಲ್ಲಿ ಸಿನಿಮಾ ಮೂಡಿಬರುತ್ತಿದೆ. ಇಲ್ಲಿ ಭಾಗ್ಯಶ್ರೀ ಮುಖ್ಯಪಾತ್ರದಲ್ಲಿರಲಿದ್ದು, ಮಾಲಿವುಡ್ ಡೆಬ್ಯೂ ಬಗ್ಗೆ ಆಶಾವಾದ ಹೊಂದಿದ್ದಾರೆ. -ಏಜೆನ್ಸೀಸ್