ನಾಯಕತ್ವದಿಂದ ರಿಜ್ವಾನ್​ ವಜಾ: ಪಾಕ್​ ಏಕದಿನ ತಂಡಕ್ಕೆ ಹೊಸ ನಾಯಕ ನೇಮಕ! ಬದಲಾಗುತ್ತಾ ಲಕ್? Pakistan ​

Pakistan
Published on

ಇಸ್ಲಮಾಬಾದ್​: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಪಾಕಿಸ್ತಾನ ( Pakistan ) ಕ್ರಿಕೆಟ್ ಮಂಡಳಿ (ಪಿಸಿಬಿ) ಒಂದು ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ. ಅದೇನೆಂದರೆ, ಏಕದಿನ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಅವರನ್ನು ಪಿಸಿಬಿ ವಜಾಗೊಳಿಸಿದೆ. ಆ ಸ್ಥಾನಕ್ಕೆ ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ ಅವರನ್ನು ನೇಮಕ ಮಾಡಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಿಂದ ಶಾಹೀನ್​ ಅಫ್ರಿದಿ ಅವರು ಪಾಕಿಸ್ತಾನ ಏಕದಿನ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ರಿಜ್ವಾನ್ ನಾಯಕತ್ವದಲ್ಲಿ ಪಾಕಿಸ್ತಾನ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈ ವರ್ಷ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್​ ತಂಡ ಒಂದೇ ಒಂದು ಪಂದ್ಯವನ್ನು ಸಹ ಗೆಲ್ಲಲಿಲ್ಲ. ಇದಿಷ್ಟೇ ಅಲ್ಲದೆ, ಮೆನ್ ಇನ್ ಗ್ರೀನ್ ತಂಡ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಸಹ ಕಳೆದುಕೊಂಡಿತು. ಈ ಹಿನ್ನೆಲೆಯಲ್ಲಿ ಪಿಸಿಬಿ, ರಿಜ್ವಾನ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿದೆ.

ಪಾಕಿಸ್ತಾನದ ಹಿರಿಯ ಆಯ್ಕೆ ಸಮಿತಿ ಸೋಮವಾರ (ಅ.20) ಸಭೆ ಸೇರಿತು. ವೈಟ್ ಬಾಲ್ ಮುಖ್ಯ ಕೋಚ್ ಮೈಕ್ ಹೆಸ್ಸನ್ ಕೂಡ ಈ ಸಭೆಯಲ್ಲಿ ಹಾಜರಿದ್ದರು. ಶಾಹೀನ್ ಶಾ ಅಫ್ರಿದಿ ಅವರನ್ನು ಏಕದಿನ ತಂಡದ ನಾಯಕರನ್ನಾಗಿ ಈ ವೇಳೆ ನೇಮಿಸಲಾಯಿತು. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಶಾಹೀನ್ ಅವರು ಪಾಕಿಸ್ತಾನ ಏಕದಿನ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪಿಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ನಿರ್ಧಾರದೊಂದಿಗೆ ಪಾಕಿಸ್ತಾನ ತಂಡವು ಈಗ ಮೂರು ಸ್ವರೂಪಗಳಲ್ಲಿ ವಿಭಿನ್ನ ನಾಯಕರನ್ನು ಹೊಂದಿದೆ. ಶಾನ್ ಮಸೂದ್ ಪಾಕಿಸ್ತಾನದ ಟೆಸ್ಟ್ ತಂಡದ ನಾಯಕರಾಗಿದ್ದರೆ, ಸಲ್ಮಾನ್ ಅಲಿ ಆಘಾ ಟಿ20 ನಾಯಕರಾಗಿದ್ದಾರೆ ಮತ್ತು ಶಾಹೀನ್ ಏಕದಿನ ತಂಡದ ನಾಯಕರಾಗಿದ್ದಾರೆ. ಶಾಹೀನ್ ಅವರನ್ನು ಈ ಹಿಂದೆ ಟಿ20 ನಾಯಕರನ್ನಾಗಿ ನೇಮಿಸಲಾಗಿತ್ತು. ಆದರೆ, ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 1-4 ಅಂತರದಿಂದ ಸೋತ ನಂತರ, ಆಯ್ಕೆದಾರರು ಶಾಹೀನ್​ ಅವರನ್ನು ನಾಯಕತ್ವದಿಂದ ತೆಗೆದುಹಾಕಿದರು.

ಆಫ್ರಿದಿ ಈಗ 50 ಓವರ್‌ಗಳ ಸ್ವರೂಪದಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ. 25 ವರ್ಷದ ಶಾಹೀನ್ ಪಾಕಿಸ್ತಾನ ಪರ 66 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು 131 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಶಾಹೀನ್​ ಅವರು ಪಾಕ್​ ದಿಗ್ಗಜ ಕ್ರಿಕೆಟಿಗ ಶಾಹೀದ್​ ಅಫ್ರಿದಿ ಅವರ ಅಳಿಯ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net