

ನವದೆಹಲಿ: “ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದವರಿಗೆ ಭಾರತದಲ್ಲಿ ನೀಟ್ ಮತ್ತು ಯುಜಿಸಿ-ನೆಟ್ ಪೇಪರ್ ಸೋರಿಕೆಯನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯ ಸಂಗತಿ” ಎಂದು ಪ್ರಧಾನಿ ಮೋದಿ ವಿರುದ್ಧ ಸಂಸದ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ ರಾಹುಲ್ ಗಾಂಧಿ, ಮೋದಿಯವರು ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸಿದರು ಎಂದು ಹೇಳಲಾಗುತ್ತಿದೆ. ಆದರೆ, ನರೇಂದ್ರ ಮೋದಿಯವರು ಭಾರತದಲ್ಲಿ ಪೇಪರ್ ಸೋರಿಕೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ ಅಥವಾ ಅವರು ಪೇಪರ್ ಸೋರಿಕೆಯನ್ನು ನಿಲ್ಲಿಸಲು ಬಯಸಲಿಲ್ಲ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್‌ನ ಆಜ್ಞೆಯ ಮೇರೆಗೆ ಪೇಪರ್ ಸೋರಿಕೆ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
"ಮಧ್ಯಪ್ರದೇಶದಲ್ಲಿ ವ್ಯಾಪಂ (ಹಗರಣ) ನಡೆದಿದೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರ ಈಗ ಆ ಹಗರಣವನ್ನು ಪ್ರಪಂಚದಾದ್ಯಂತ ಪುನರಾವರ್ತಿಸಲು ಯೋಜಿಸುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಬಿಜೆಪಿಯ ಮಾತೃ ಸಂಸ್ಥೆ ವಶಪಡಿಸಿಕೊಂಡಿದ್ದು ಇದೇ ಪೇಪರ್ ಸೋರಿಕೆಗೆ ಪ್ರಮುಖ ಕಾರಣವಾಗಿದೆ. ಇದುವರೆಗೂ ಇದು ವ್ಯತಿರಿಕ್ತವಾಗಿಲ್ಲ, ಪೇಪರ್ ಸೋರಿಕೆಯು ಮುಂದುವರಿಯುತ್ತದೆ, ಇದು ದೇಶವಿರೋಧಿ ಚಟುವಟಿಕೆ ಎಂದು ವಾಗ್ದಾಳಿ ನಡೆಸಿದರು.
ಜೂನ್ 18ರಂದು (ಮಂಗಳವಾರ) ನಡೆದಿದ್ದ ಯುಜಿಸಿ ನೆಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪರೀಕ್ಷೆಯಲ್ಲಿನ ಅಕ್ರಮ ನಡೆದಿದೆ ಎಂಬ ಹಲವು ದೂರುಗಳು ಬಂದ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಶಿಕ್ಷಣ ಸಚಿವಾಲಯವು, ಪರೀಕ್ಷೆ ನಡೆದ ಮರುದಿನವೇ ಯುಜಿಸಿ ನೆಟ್ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಅಲ್ಲದೇ ಯುಜಿಸಿ ನೆಟ್ ಪರೀಕ್ಷೆ ಅಕ್ರಮದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿದೆ.
ಜೂನ್ 18ರ UGC-NET ಪರೀಕ್ಷೆಯನ್ನು ದೇಶದಾದ್ಯಂತ 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 11 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದ್ರೆ, ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಶಿಕ್ಷಣ ಸಚಿವಾಲಯವು UGC-NET ಜೂನ್ 2024 ಪರೀಕ್ಷೆಯನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ.