

ನವದೆಹಲಿ: ಇಂಡೋನೇಷ್ಯಾದಲ್ಲಿ ನಡೆಯಲಿರುವ 17ನೇ ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇಂದು(ಸೋಮವಾರ) ಇಂಡೋನೇಷ್ಯಾಗೆ ತೆರಳಿದ್ದಾರೆ. ಇಂಡೋನೇಷ್ಯಾ ರಾಜಧಾನಿ ಬಾಲಿಯಲ್ಲಿ ಇಳಿದ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತವೇ ದೊರತಿದೆ.
ಮೂರು ದಿನಗಳ ಇಂಡೋನೇಷ್ಯಾ ಭೇಟಿ ವೇಳೆ ಸುಮಾರು 10 ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇಂತಹ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಗೆ ಇಂಡೋನೆಷ್ಯಾ ಸರ್ಕಾರ ಅಲ್ಲಿನ ಸಾಂಸ್ಕೃತಿಕ ಪದ್ಧತಿ ಪ್ರಕಾರ ಹೂಮಳೆ ಸುರಿಸಿ ಬರ ಮಾಡಿಕೊಂಡಿದೆ.
ಬಾಲಿಯಲ್ಲಿ ಇಳಿದ ಕೂಡಲೇ ಪ್ರಧಾನಿ ಇಂಡೋನೆಷ್ಯಾದ ಬಹಾಸಾ ಭಾಷೆಯಲ್ಲಿ ಟ್ವೀಟ್ ಮಾಡಿದ್ದು 'ಹಲೊ ಇಂಡೋನೆಷ್ಯಾ. ಈಗ ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಲು ಬಾಲಿಗೆ ಬಂದಿಳಿದಿದ್ದೇನೆ. ಜಾಗತಿಕ ಸಮಸ್ಯೆಗಳ ಕುರಿತು ವಿವಧ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲು ಕಾತುರನಾಗಿದ್ದೇನೆ' ಎಂದು ಬರೆದಿದ್ದಾರೆ.
ಸುಮಾರು 45 ಗಂಟೆಗಳ ಕಾಲ ಬಾಲಿಯಲ್ಲಿ ಇರುವ ಮೋದಿ ಜಿ-20 ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ಪರಿವರ್ತನೆ ಮತ್ತು ಆರೋಗ್ಯ ಕುರಿತ ಮೂರು ಮಹತ್ವದ ಅಧಿವೇಶನಗಳೂ ಸೇರಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವತ್ರಾ ತಿಳಿಸಿದ್ದಾರೆ. (ಏಜೆನ್ಸೀಸ್)