

ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ಮುಂಗಾರು ಮಳೆ ಮತ್ತಷ್ಟು ಇಳಿಮುಖವಾಗಿದೆ. ಆದರೆ ಜೂ.20ರ ವರೆಗೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ದ.ಕ.ಜಿಲ್ಲೆಯಲ್ಲಿ ಶುಕ್ರವಾರ ದಿನಪೂರ್ತಿ ಮೋಡ ಹಾಗೂ ಬಿಸಿಲಿನ ವಾತಾವರಣ ಕಂಡುಬಂದಿತ್ತು. ಅಲ್ಲಲ್ಲಿ ತುಂತುರು ಮಳೆ ಬಿಟ್ಟರೆ, ಧಾರಾಕಾರ ಮಳೆಯಾಗಿಲ್ಲ. ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿನ ವರೆಗೆ ಉಳ್ಳಾಲದಲ್ಲಿ ಗರಿಷ್ಠ 55.4 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯ ಸರಾಸರಿ ಮಳೆ 37.9 ಮಿ.ಮೀ. ಆಗಿದೆ. ಬೆಳ್ತಂಗಡಿ 36 ಮಿ.ಮೀ, ಬಂಟ್ವಾಳ 43 ಮಿ.ಮೀ, ಪುತ್ತೂರು 33 ಮಿ.ಮೀ, ಸುಳ್ಯ 32.1 ಮಿ.ಮೀ, ಮೂಡುಬಿದಿರೆ 41.4 ಮಿ.ಮೀ, ಕಡಬ 36.2 ಮಿ.ಮೀ, ಮೂಲ್ಕಿ 44.9 ಮಿ.ಮೀ. ಮಳೆ ವರದಿಯಾಗಿದೆ.
*ಜೂನ್ 17ರಿಂದ ಮಳೆ ಚುರುಕು
ಈಗಿನ ಪ್ರಕಾರ ಜೂನ್ 15ರಿಂದ ರಾಜ್ಯದಾದ್ಯಂತ ಮುಂಗಾರು ದುರ್ಬಲಗೊಳ್ಳುವ ಮುನ್ಸೂಚೆನೆ ಇದೆ. ಆದರೂ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಬಿಸಿಲಿನ ವಾತಾವರಣದ ಸಾಧ್ಯತೆ ಇದ್ದರೂ, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮೋಡದ ವಾತಾವರಣದ ಮುನ್ಸೂಚೆನೆ ಇದೆ. ಜೂನ್ 17ರಿಂದ ಮಳೆ ಸ್ವಲ್ಪ ಮಟ್ಟಿಗೆ ಚುರುಕಾಗುವ ಲಕ್ಷಣಗಳಿವೆ.
*ಕರಾವಳಿಯಲ್ಲಿ ಸಮುದ್ರದಬ್ಬರ ಹೆಚ್ಚಳ
ರಾಜ್ಯದಲ್ಲಿ ದುರ್ಬಲ ಮುಂಗಾರು ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲಿ ಗಾಳಿ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದು, ಮುಂದಿನ 48 ಗಂಟೆಗಳಲ್ಲಿ ಕರ್ನಾಟಕ ಮತ್ತು ಗೋವಾ ಕರಾವಳಿಯಲ್ಲಿ ಸಮುದ್ರದಬ್ಬರ ಹೆಚ್ಚಾಗಲಿದೆ. ಜಿಲ್ಲೆಯಲ್ಲಿ ಗರಿಷ್ಠ 29.2 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ನೈಋತ್ಯ ಮಾನ್ಸೂನ್ ಶುಕ್ರವಾರ ಮಾಲ್ಡೀವ್ಸ್ ಮತ್ತು ಕೊಮೊರಿನ್ ಪ್ರದೇಶ, ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉಳಿದ ಭಾಗಗಳು ಹಾಗೂ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮತ್ತಷ್ಟು ಮುಂದುವರಿಯಲಿದ್ದು, ಕರಾವಳಿಯಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಗುಡುಗು ಸಹಿತ ಗಾಳಿ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.