

ಬೈಂದೂರು: ಯಾವುದೇ ಊರು ಸಾಂಸ್ಕೃತಿಕವಾಗಿ ಬೆಳೆದಲ್ಲಿ ಅಲ್ಲಿಯ ಜನರ ಪ್ರೌಢಿಮೆ ವಿಕಸಿತವಾಗುತ್ತದೆ. ಗ್ರಾಮೀಣ ಪರಿಸರದ ಸುಪ್ತ ಪ್ರತಿಭೆಗಳು ಅವಕಾಶ ವಂಚಿತರಾಗಬಾರದು ಎಂಬ ಧ್ಯೇಯವನ್ನಿಟ್ಟು ರಂಗಾಸಕ್ತರನ್ನು ಒಗ್ಗೂಡಿಸಿ ಬಾಲ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಅರೆಹೊಳೆ ಪ್ರತಿಷ್ಠಾನದ ಕಾರ್ಯ ಇತರ ಸಂಸ್ಥೆಗಳಿಗೆ ಮಾದರಿ ಎಂದು ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಹೇಳಿದರು.
ಅರೆಹೊಳೆ ಪ್ರತಿಷ್ಠಾನ ಆಯೋಜಿಸಿದ ನೃತ್ಯ ವರ್ಷಾದಲ್ಲಿ ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ಕಟ್ಟಡಗಳು ತಲೆ ಎತ್ತಿದವು, ರಸ್ತೆಗಳು ವಿಸ್ತರಣೆಯಾದವು, ಹಾಗೆಯೇ ಕುಟುಂಬದೊಳಗಿನ ಸಂಬಂಧಗಳೂ ಸಡಿಲಗೊಂಡವು. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಮತ್ತೆ ಸಂಬಂಧಗಳು ಬೆಸೆಯಬೇಕಾದರೆ ರಂಗಭೂಮಿ ಅತ್ಯವಶ್ಯಕ ಎಂದರು.
ಕೊಡೇರಿ ವಾಸುದೇವ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು. ಎ.ಶಿವರಾಂ ಮಧ್ಯಸ್ಥ, ಖಂಬದಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಅರೆಹೊಳೆ ಗಣಪಯ್ಯ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿದರು. ಮಂಜುನಾಥ ಹಿಲಿಯಾಣ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ವೈವಿಧ್ಯ ನಡೆಯಿತು.