

ಗಂಗೊಳ್ಳಿ: ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿಬಲೆ ಎಂಬಲ್ಲಿ ಸ್ಮಶಾನ ಹಾಗೂ ದೇವಸ್ಥಾನದ ಸಂಪರ್ಕ ರಸ್ತೆ ಬಂದ್ ವಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಕಂಚುಗೋಡು ಸನ್ಯಾಸಿಬಲೆ ಸಾರ್ವಜನಿಕರು ಗುಜ್ಜಾಡಿ ಗ್ರಾಮ ಪಂಚಾಯಿತಿ ಎದುರು ಅಣುಕು ಶವಯಾತ್ರೆ ಹಾಗೂ ಭಜನೆ ಮೂಲಕ ಶಾಂತಿಯುತವಾಗಿ ಸೋಮವಾರ ಪ್ರತಿಭಟಿಸಿದರು.
ಈ ಪರಿಸರದಲ್ಲಿ ಮೂರು ದೇವಸ್ಥಾನ ಹಾಗೂ ಸಮುದ್ರ ಕಿನಾರೆಗೆ ಖಾಸಗಿ ಜಾಗದಲ್ಲಿ ಹೋಗಬೇಕು. ಜಮೀನು ಮಾಲೀಕರು ಜಾಗ ಬಿಡುವ ಭರವಸೆ ನೀಡಿದ್ದರೂ ಈವರೆಗೆ ಜಾಗ ಬಿಡದೆ ಬೃಹತ್ ಆವರಣಗೋಡೆ ನಿರ್ಮಿಸುತ್ತಿದ್ದು, ದೇವಸ್ಥಾನಕ್ಕೆ ಹೋಗಲು ದಾರಿ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದರು. ಅಲ್ಲದೆ ಅನಾದಿ ಕಾಲದಿಂದ ಇದ್ದ ರುದ್ರಭೂಮಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಿದ್ದು, ಶವ ದಫನ ವಾಡಲು ವ್ಯವಸ್ಥೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆವರಣ ಗೋಡೆ ನಿರ್ವಾಣ ಅನುಮತಿಯನ್ನು ಗ್ರಾಪಂ ರದ್ದುಪಡಿಸಿದ್ದರೂ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಶಾಸಕರು, ಸಚಿವರ ಸಹಿತ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಪಟೇಲ್ ನಾಗೇಶ ಖಾರ್ವಿ, ಗ್ರಾಪಂ ವಾಜಿ ಸದಸ್ಯ ವಿ.ಕೆ.ಸುರೇಶ್ ಖಾರ್ವಿ, ದೇವದಾಸ ಖಾರ್ವಿ ನಾಯಕವಾಡಿ, ಪ್ರಶಾಂತ ಪೂಜಾರಿ, ನಾಗೇಶ ಖಾರ್ವಿ, ಶಂಕರ ಖಾರ್ವಿ, ಕೃಷ್ಣ ಪಟೇಲ್, ವೆಂಕಟೇಶ ಖಾರ್ವಿ, ಹರೀಶ ಖಾರ್ವಿ, ರವಿ ಖಾರ್ವಿ, ಸತೀಶ್ ಪಟೇಲ್, ವಿನೋದ ಪಿ., ದಾಮು ಶರತ್, ನಿತಿನ್, ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.