ಕಾವೇರಿ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿ: ಸಿಎಂಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸಲಹೆ

Mlc Marithibegowda)
Published on

ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಾಗೂ ಬೆಳೆಗೆ ನೀರು ಕೊಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರವಾಗಿ ಪರಿಗಣಿಸಬೇಕು. ಅಂತೆಯೆ ನೀರಿನ ಅಗತ್ಯತೆ ಬಗ್ಗೆ ಚರ್ಚಿಸಲು ಸಭೆ ಆಯೋಜಿಸುವಂತೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸಕ್ತ ಮುಂಗಾರು ಮಳೆ ಶೇ.50ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪರಿಣಾಮ ಕೆಆರ್‌ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯದಲ್ಲಿ ನೀರಿನ ಶೇಖರಣೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಾವೇರಿ ಜಲಾಶಯಗಳ ವ್ಯಾಪ್ತಿಯ ಮೈಸೂರು, ಮಂಡ್ಯ, ತುಮಕೂರು, ಕೊಡಗು, ಚಾಮರಾಜನಗರ, ರಾಮನಗರ, ಬೆಂಗಳೂರು ಪ್ರದೇಶಗಳಲ್ಲಿ ಹಾಲಿ ಇರುವ ಬೆಳೆಗೂ ನೀರನ್ನು ಒದಗಿಸಲು ಸಾಧ್ಯವಾಗಿಲ್ಲ. ಬೆಳೆಗಳು ಸಂಪೂರ್ಣ ಹಾಳಾಗಿರುತ್ತದೆ. ಮುಂಗಾರು ಬೆಳೆಗೂ ಸಹ ನೀರನ್ನೇ ಒದಗಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಪ್ರದೇಶಗಳ ಕೆರೆಗಳು ಒಣಗಿ ಹೋಗಿರುವ ಕಾರಣದಿಂದ ಅಂತರ್ಜಲದ ಮಟ್ಟ ಕುಸಿತ ಉಂಟಾಗಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಇನ್ನು ಮುಂಗಾರು ಬೆಳೆಗೆ ನೀರು ಬಿಡದ ಕಾರಣ ರೈತರಿಗೆ ತೊಂದರೆಗೊಳಗಾಗಿದ್ದಾರೆ ಎಂದಿದ್ದಾರೆ.

ನೀರಾವರಿ ಪ್ರಾಧಿಕಾರದ ಸೂಚನೆಯಂತೆ ಕೆಆರ್‌ಎಸ್ ಡ್ಯಾಂನಿಂದ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇತ್ತ ಕಾವೇರಿ ಕೊಳ್ಳದ ಮುಂಗಾರು ಬೆಳೆಗೆ ಇದುವರೆವಿಗೂ ನೀರನ್ನು ಬಿಡುಗಡೆ ಮಾಡದೆ ಇರುವುದು ತುಂಬಾ ದುರದೃಷ್ಟಕರ ಸಂಗತಿ. ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಚಳವಳಿ ನಡೆಸಲಾಗುತ್ತಿದೆ. ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ನಾಲ್ಕು ಜಲಾಶಯದಲ್ಲಿ ಇರುವ ನೀರಿನ ಪ್ರಮಾಣವನ್ನು ಪರಿಶೀಲಿಸಿ ಹಾಗೂ ಅಗತ್ಯತೆ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾಣ ತೆಗೆದುಕೊಳ್ಳಲು ಕಾವೇರಿಕೊಳ್ಳದ ಶಾಸಕರೊಂದಿಗೆ ಸಭೆ ಆಯೋಜಿಸಬೇಕೆಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net