ಹಿಮೋ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಆರ್ಥಿಕ ಸಮಸ್ಯೆ: ಉಚಿತ ಸೌಲಭ್ಯ ಒದಗಿಸಲು ಆರೋಗ್ಯ ಸಚಿವರಿಗೆ ಮಂಡ್ಯ ಎಂಎಲ್ಸಿ ಮನವಿ

MLC appeal for free hemodialysis treatment
Published on

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಹಿಮೋ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಸೌಲಭ್ಯ ಒದಗಿಸುವಂತೆ ವಿಧಾನ ಪರಿಷತ್ ಸದಸ್ಯದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕಾರ್ಯಕಾರಿ ನಿರ್ದೇಶಕಿ ವಿನೋದ್ ಪ್ರಿಯಾ ಅವರನ್ನು ಶುಕ್ರವಾರ ಭೇಟಿಯಾಗಿ ಮನವಿ ಸಲ್ಲಿಸಿರುವ ಎಂಎಲ್‌ಸಿ, ಮಿಮ್ಸ್‌ನಲ್ಲಿ 18 ಡಯಾಲಿಸಿಸ್ ಯಂತ್ರಗಳಿವೆ. ಪ್ರತಿ ತಿಂಗಳು 40 ರಿಂದ 50 ಜನರಿಗೆ ಹಿಮೋ ಡಯಾಲಿಸಿಸ್ ಚಿಕಿತ್ಸೆ ನೀಡಲಾಗುತ್ತಿದೆ. ವಾರ್ಷಿಕವಾಗಿ ಸುಮಾರು 11,140 ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ರೋಗಿಯು ಪ್ರತಿ ಡಯಾಲಿಸಿಸ್ ಚಿಕಿತ್ಸೆಗೆ 200 ರೂ ಪಾವತಿಸುತ್ತಿದ್ದು, ಇದು ಬಡ ರೋಗಿಗಳಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ವಿವರಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಅಡಿ ಹಿಮೋ ಡಯಾಲಿಸಿಸ್ ಕೋಡ್-2ಎ.ಎಸ್1.00214 ಮತ್ತು 2ಎ.ಎಸ್1.00214ಎ ಗೆ ಅನುಮತಿ ನೀಡಲಾಗಿದೆ. ಆದರೆ, ಕೆಲ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮಾತ್ರ ಹಿಮೋ ಡಯಾಲಿಸಿಸ್ ಚಿಕಿತ್ಸೆಯನ್ನು ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ ನೀಡಲಾಗುತ್ತಿದೆ. ಆದ್ದರಿಂದ ಮಿಮ್ಸ್ನಲ್ಲಿ ಚಿಕಿತ್ಸೆ ಪಡೆಯುವ ಹಿಮೋ ಡಯಾಲಿಸಿಸ್ ರೋಗಿಗಳಿಗೂ ಅನುಮತಿ ನೀಡಬೇಕು. ಇದರಿಂದ ಅವರಿಗೆ ಇರುವ ಆರ್ಥಿಕ ಹೊರೆಯು ಸಹ ತಗ್ಗಲಿದೆ ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net