ಉಡುಪಿಗೆ ಮಂಜೂರು ಮಾಡಿ ಐಟಿ-ಬಿಟಿ ಪಾರ್ಕ್​...

Yashpal
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹ

ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ ಖರ್ಗೆಗೆ ಮನವಿ

ವಿಜಯವಾಣಿ ಸುದ್ದಿಜಾಲ ಉಡುಪಿ

ಶಿಕ್ಷಣ ಕಾಶಿ ಎಂದು ಪ್ರಸಿದ್ಧವಾಗಿರುವ, ಶೈಕ್ಷಣಿಕವಾಗಿ ನಿರಂತರ ಉತ್ತಮ ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಉಡುಪಿಗೆ ಐಟಿ-ಬಿಟಿ ಪಾರ್ಕ್​ ಮಂಜೂರು ಮಾಡಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಜಿಲ್ಲೆಯಲ್ಲಿದೆ ಸಕಲ ಸೌಕರ್ಯ

ಉಡುಪಿಯಲ್ಲಿ ಐಟಿ-ಬಿಟಿ ಪಾರ್ಕ್​ ಆಗಬೇಕು ಎನ್ನುವುದು ಈ ಭಾಗದ ಯುವ ಜನತೆಯ ಬಹು ದಶಕದ ಬೇಡಿಕೆಯಾಗಿದೆ. ಉಡುಪಿ ಜಿಲ್ಲೆಯು ಭೂ, ಜಲ, ರೈಲ್ವೆ ಮತ್ತು ಸನಿಹದಲ್ಲೇ ವಾಯು ಸಾರಿಗೆಯ ಸಂಪರ್ಕವನ್ನೂ ಹೊಂದಿದೆ. ಧಾರ್ಮಿಕ, ಪ್ರವಾಸೋದ್ಯಮ, ಮೀನುಗಾರಿಕೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್​ ವ್ಯವಸ್ಥೆ, ಸಹಕಾರ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಎಲ್ಲ ಮೂಲಸೌಲಭ್ಯವನ್ನೂ ಹೊಂದಿದೆ ಎಂದು ಜಿಲ್ಲೆಯ ವಿಶೇಷತೆಯ ಕುರಿತು ಸಚಿವ ಖರ್ಗೆಗೆ ಯಶ್​ಪಾಲ್​ ಮನವರಿಕೆ ಮಾಡಿದರು.

ಪ್ರತಿಭಾವಂತರಿಗೆ ಉದ್ಯೋಗ ಅವಕಾಶ

Yashpal 1
ಪ್ರತಿ ವರ್ಷವೂ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್​ ಪೂರ್ಣಗೊಳಿಸುತ್ತಾರೆ. ಬಳಿಕ ಜಿಲ್ಲೆಯಲ್ಲಿ ವಿದ್ಯಾಭ್ಯಾಸಕ್ಕೆ ಸೂಕ್ತವಾದ ಉದ್ಯೋಗ ಅವಕಾಶ ದೊರಕದೆ ಅನ್ಯ ಜಿಲ್ಲೆ ಅಥವಾ ಹೊರ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿಯಿದೆ. ಜಿಲ್ಲೆಯ ಪ್ರತಿಭಾವಂತ ಪದವೀಧರರಿಗೆ ಸ್ಥಳೀಯವಾಗಿ ಉದ್ಯೋಗ ಅವಕಾಶ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಹೀಗಾಗಿ ಪದವೀಧರರಿಗೆ ಜಿಲ್ಲೆಯಲ್ಲಿಯೇ ಉದ್ಯೋಗ ದೊರಕುವಂತಾಗಲು, ಅವರ ವಲಸೆ ತಪ್ಪಿಸಿಲು ಉಡುಪಿಯಲ್ಲಿ ಐಟಿ-ಬಿಟಿ ಪಾರ್ಕ್​ ಆರಂಭಿಸಬೇಕಿದೆ. ಈ ಯೋಜನೆಗೆ ಸರ್ಕಾರದ ವತಿಯಿಂದ ಅಥವಾ ಖಾಸಗಿ ಸಹಭಾಗಿತ್ವದೊಂದಿಗೆ ಅನುಷ್ಠಾನಗೊಳಿಸಲು ವಿಶೇಷ ಮುತುವರ್ಜಿ ವಹಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಮನವಿ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net