18 ವರ್ಷದಿಂದ ಶಾಸಕ ಯಶ್ಪಾಲ್ ಸುವರ್ಣ ವ್ರತ
ಶ್ರೀಕೃಷ್ಣ ಮಠದಲ್ಲಿ ಪ್ರತಿ ಶನಿವಾರ ಪ್ರಸಾದ ಭೋಜನ
ಪ್ರಶಾಂತ ಭಾಗ್ವತ, ಉಡುಪಿ
ಸನಾತನ ಧರ್ಮ, ದೇವ-ದೈವಾರಾಧನೆಯಲ್ಲಿ ಅಪಾರ ಶ್ರದ್ಧೆ-ನಂಬಿಕೆ ಹೊಂದಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಾಡಿನ ಹಾಗೂ ಸ್ವಯಂ ಶ್ರೇಯಸ್ಸಿಗಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನೆಲದ ಊಟ ಸೇವೆ ನಡೆಸುತ್ತಾರೆ.

ಪ್ರತಿ ಶನಿವಾರ ಮಧ್ಯಾಹ್ನ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸುವ ಅವರು, ಮುಖ್ಯಪ್ರಾಣನ ಸನ್ನಿಧಿಯ ಸಾರ್ವಜನಿಕ ಭೋಜನಾಲಯದಲ್ಲಿ ನೆಲದ ಮೇಲೆಯೇ ಪದಾರ್ಥದೊಂದಿಗೆ ಅನ್ನ ಕಲಸಿ ಊಟ ಮಾಡುತ್ತಾರೆ. ದೇವರ ಅನ್ನ ಪ್ರಸಾದ ಸೇವನೆಯ ಕೈಂಕರ್ಯವನ್ನು ವ್ರತವಾಗಿ ಪಾಲಿಸುತ್ತಿದ್ದಾರೆ.
ಬಾಲ್ಯದಿಂದಲೇ ನಂಟು
ಚಿಕ್ಕಂದಿನಿಂದಲೇ ಧಾರ್ಮಿಕ ಕ್ಷೇತ್ರವಾದ ಉಡುಪಿ ಪರಿಸರದ ಪ್ರಭಾವಕ್ಕೊಳಗಾಗಿದ್ದ ಯಶ್ಪಾಲ್ಗೆ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ (ಹನುಮ)ನೆಂದರೆ ಅಪಾರ ಪ್ರೀತಿ-ಭಕ್ತಿ. ಶಾಸಕನಾದ ಬಳಿಕ ಹಾಗೂ ಮೊದಲೂ ಸಹ ಪ್ರತಿದಿನ ಕಾರ್ಯದ ನಿಮಿತ್ತ ಮನೆಯಿಂದ ಹೊರಡುವಾಗ ಪೊಡವಿಗೊಡೆಯ ಶ್ರೀಕೃಷ್ಣ, ಶಕ್ತಿದೇವ ಮುಖ್ಯಪ್ರಾಣರನ್ನು ಸ್ಮರಿಸಿಯೇ ತೆರಳುತ್ತಾರೆ. ಕಾರ್ಯದ ನಿಮಿತ್ತ ಶನಿವಾರ ಬೇರೆ ಊರಿನಲ್ಲಿದ್ದರೆ ಅಲ್ಲಿಂದಲೇ ದೇವರು ಹಾಗೂ ನೆಲದ ಊಟ ಸ್ಮರಿಸಿ ಕೈಮುಗಿಯುತ್ತಾರೆ.
18 ವರ್ಷದಿಂದ ಸೇವೆ
ಈ ಹಿಂದೆ ಶ್ರಾವಣ ಶನಿವಾರದಂದು ಮಾತ್ರ ಉಡುಪಿ ಮಠಕ್ಕೆ ಆಗಮಿಸಿ ಮಧ್ಯಾಹ್ನದ ಅನ್ನ ಪ್ರಸಾದವನ್ನು ನೆಲದ ಊಟವಾಗಿ ಸ್ವೀಕರಿಸುತ್ತಿದ್ದರು. ಕಳೆದ 18 ವರ್ಷದಿಂದ ಪ್ರತಿ ಶನಿವಾರ ನಸುಕಿನ 5 ಗಂಟೆಗೆ ತಪ್ಪದೇ ಉಡುಪಿ ಮಠಕ್ಕೆ ಆಗಮಿಸಿ, ಶ್ರೀಕೃಷ್ಣ-ಮುಖ್ಯಪ್ರಾಣ ದೇವರಿಗೆ ನಮಸ್ಕರಿಸುತ್ತಾರೆ. ಅಲ್ಲದೆ, ಮಧ್ಯಾಹ್ನ ಮತ್ತೆ ಬಂದು ಸಾರ್ವಜನಿಕ ಭೋಜನಾಲಯದಲ್ಲಿ ನೆಲದ ಊಟ ಮಾಡಿ ತೆರಳುತ್ತಾರೆ.
ಪ್ರಧಾನಿ ಮೋದಿ, ಸೈನಿಕರಿಗಾಗಿ ಪ್ರಾರ್ಥನೆ
ತಪ್ಪದೇ ಪ್ರತಿ ಶನಿವಾರ ನಸುಕಿನಲ್ಲಿ ಉಡುಪಿ ಮಠಕ್ಕೆ ಆಗಮಿಸಿ ವಿಶೇಷ ಪ್ರಾರ್ಥನೆ ಮಾಡುತ್ತೇನೆ. ಈ ದಿನ (ಮೇ10ರಂದು) ನಸುಕಿನಲ್ಲಿ ಮಠಕ್ಕೆ ಬಂದು ಭಾರತ ದೇಶ ಹಾಗೂ ಇಲ್ಲಿನ ನಿವಾಸಿಗರಿಗೆ ರಕ್ಷಣೆ ಕೊಡುವಂತೆ ಪ್ರಾರ್ಥಿಸಿದ್ದೇನೆ. ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ನಮ್ಮ ದೇಶ ಪಾಕಿಸ್ತಾನದೊಂದಿಗೆ ಯುದ್ಧ ನಡೆಸಿದೆ. ಹೀಗಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುದ್ಧ ನಿರತ ನಮ್ಮ ಸೈನಿಕರಿಗೆ ಹೆಚ್ಚಿನ ಶಕ್ತಿ, ಜೀವರಕ್ಷಣೆ, ಅಂತಿಮವಾಗಿ ಭಾರತ ಮಾತೆಗೆ ವಿಜಯ ದಯಪಾಲಿಸು ಎಂದು ಶ್ರೀಕೃಷ್ಣ-ಮುಖ್ಯಪ್ರಾಣ ದೇವರಲ್ಲಿ ಬೇಡಿಕೊಂಡಿದ್ದೇನೆಂದು ಶಾಸಕ ಯಶ್ಪಾಲ್ ಸುವರ್ಣ ವಿಜಯವಾಣಿಗೆ ತಿಳಿಸಿದ್ದಾರೆ.
ನೆಲದ ಮೇಲೆ ಅನ್ನ ಪ್ರಸಾದ ಸೇವನೆಯಿಂದ ನನಗೆ ಒಳಿತಾಗಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಲ್ಲಿ, ಬಳಿಕ ಗೆಲುವು ಲಭಿಸುವಲ್ಲಿ ನನ್ನ ಪ್ರೀತಿ-ಭಕ್ತಿಯ ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಆಶೀರ್ವಾದವೇ ಕಾರಣ. ಶಾಸಕನಾಗಿ ಆಯ್ಕೆಯಾಗುವ ಮೂಲಕ ಶ್ರೀಕೃಷ್ಣನ ಕ್ಷೇತ್ರದ ಜನರ ಸೇವೆ ಮಾಡುವ ಅವಕಾಶ ದೊರಕಿರುವದು ನನ್ನ ಪುಣ್ಯವಾಗಿದೆ.
| ಯಶ್ಪಾಲ್ ಸುವರ್ಣ. ಶಾಸಕಉಡುಪಿಯ ಶ್ರೀಕೃಷ್ಣ ಮಠವು ಅನ್ನಬ್ರಹ್ಮನ ನಾಡು. ಇಲ್ಲಿ ಏಕಾದಶಿ ದಿನ ಹೊರತುಪಡಿಸಿ ವರ್ಷದ ಎಲ್ಲ ದಿನವೂ ಭಕ್ತರಿಗೆ ಅನ್ನ ಪ್ರಸಾದವಿದೆ. ಶಾಸಕ ಯಶ್ಪಾಲ್ ಸುವರ್ಣ ಅವರ ಧಾರ್ಮಿಕ ಶೃದ್ಧೆ ಮೆಚ್ಚುವಂಥದ್ದು. ಪ್ರತಿ ಶನಿವಾರ ತಪ್ಪದೇ ಆಗಮಿಸಿ ನೆಲದ ಊಟ ಸೇವಿಸುತ್ತಾರೆ. ಇದು ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ಮೇಲೆ ಅವರಿಗಿರುವ ಭಕ್ತಿಯ ಪ್ರತೀಕವಾಗಿದೆ. ದೇಶ-ವಿದೇಶದ ಅನೇಕ ಭಕ್ತರು ಇಷ್ಟಾರ್ಥ ಪ್ರಾಪ್ತಿಗಾಗಿ ಉಡುಪಿಯಲ್ಲಿ ನೆಲದ ಊಟ ಹರಕೆ ಹೇಳಿಕೊಳ್ಳುವ ಸಂಪ್ರದಾಯವಿದೆ.
| ಸುಗುಣೇಂದ್ರ ತೀರ್ಥ ಶ್ರೀಪಾದರು. ಪರ್ಯಾಯ ಪುತ್ತಿಗೆ ಮಠ