ಪೊಲೀಸ್​ ಇಲಾಖೆಗೆ ಶಾಸಕ ಯಶ್​ಪಾಲ್​ ಅಭಿನಂದನೆ...

Yashpal
Published on

ಉಡುಪಿ: ಬ್ರಹ್ಮಾವರದ ಕುಂಜಾಲು ಜಂಕ್ಷನ್​ ಬಳಿ ದನದ ರುಂಡ ಹಾಗೂ ದೇಹದ ಭಾಗ ಪತ್ತೆ ಘಟನೆಗೆ ಸಂಬಂಧಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹಾಗೂ ಬ್ರಹ್ಮಾವರ ಪೊಲೀಸ್​ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ತಿಳಿಸಿದ್ದಾರೆ.

ಗೋಮಾತೆಯನ್ನು ಹತ್ಯೆ ಮಾಡಿ ಅದನ್ನು ಕುಂಜಾಲು ರಾಮ ಮಂದಿರದ ಸಮೀಪದಲ್ಲಿ ಎಸೆದು, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿರುವುದು ಶ್ಲಾಘನೀಯ ಎಂದಿದ್ದಾರೆ.

ಕಳೆದ ಡಿಸೆಂಬರ್​ ತಿಂಗಳಿನಲ್ಲಿ ಹಾರಾಡಿ ಗ್ರಾಪಂ ವ್ಯಾಪ್ತಿಯ ರಸ್ತೆ ಬದಿಯಲ್ಲಿಯೂ ಸಹ ಗೋವಿನ ಕಳೇಬರ ಹಾಗೂ ದೇಹದ ಭಾಗಗಳನ್ನು ಎಸೆಯಲಾಗಿತ್ತು. ಬ್ರಹ್ಮಾವರ ಠಾಣೆಯಲ್ಲೇ ಪ್ರಕರಣ ದಾಖಲಾಗಿದ್ದು, ಆ ಪ್ರಕರಣದ ಆರೋಪಿಗಳನ್ನೂ ಪೊಲೀಸರು ಬಂಧಿಸಬೇಕು.

ಈ ಎರಡೂ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ, ಆರೋಪಿಗಳ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಮಾಡಬೇಕು. ಬ್ರಹ್ಮಾವರ ಪರಿಸರದಲ್ಲಿ ಗೋವು ಕಳ್ಳತನ ಹಾಗೂ ಅಕ್ರಮ ಕಸಾಯಿಕಾನೆಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಪೊಲೀಸ್​ ವರಿಷ್ಠಾಧಿಕಾರಿ ಕ್ರಮ ವಹಿಸಬೇಕು ಎಂದು ಶಾಸಕ ಯಶ್​ಪಾಲ್​ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net